ನವದೆಹಲಿ(ಜ.27): 2019ರ ಮೊದಲ ‘ಮನ್ ಕಿ ಬಾತ್’ನಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಇತ್ತೀಚಿಗೆ ಶಿವೈಕ್ಯರಾದ ತುಮಕೂರಿನ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರನ್ನು ನೆನೆದಿದ್ದಾರೆ.

ಸಿದ್ದಗಂಗಾ ಶ್ರೀಗಳ ತ್ರಿವಿಧ ದಾಸೋಹ ಇಡೀ ವಿಶ್ವಕ್ಕೆ ಒಂದು ಪಾಠ ಎಂದಿರುವ ಪ್ರಧಾನಿ, ಅಕ್ಷರ ಮತ್ತು ಅನ್ನ ದಾಸೋಹದ ಮೂಲಕ ಲಕ್ಷಾಂತರ ಜನರ ಬಾಳಲ್ಲಿ ಬೆಳಕು ಮೂಡಿಸಿದ ಶ್ರೀಗಳು ಅನಕರಣೀಯರು ಎಂದು ಹೇಳಿದರು.

ಸಿದ್ದಗಂಗಾ ಶ್ರೀಗಳ ನಿಧನ ತಮಗೆ ವೈಯಕ್ತಿಕವಾಗಿಯೂ ಭಾರೀ ದು:ಖ ತಂದಿದೆ ಎಂದ ಪ್ರಧಾನಿ, ತಮ್ಮನ್ನು ಮಗನಂತೆ ಕಂಡ ಆ ಮಹಾನ್ ಚೇತನ ಇನ್ನಿಲ್ಲ ಎಂಬ ಅನಾಥ ಭಾವ ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬಸವಣ್ಣ ಅವರ ಕಾಯಕವೇ ಕೈಲಾಸ ಸಿದ್ದಾಂತವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ಶ್ರೀಗಳು, ಅದರಂತೆ ತಮ್ಮ ಕರ್ತವ್ಯ ಮುಗಿಸಿ ಭಗವಂತನಲ್ಲಿ ಲೀನವಾಗಿದ್ದಾರೆ ಎಂದು ಪ್ರಧಾನಿ ಹೇಳಿದರು.

ಇದೇ ವೇಳೆ 2007ರಲ್ಲಿ ಶ್ರೀಗಳ ಜನ್ಮ ಶತಾಬ್ದಿ ಸಮಾರಂಭದಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಹೇಳಿದ್ದ ಮಾತುಗಳನ್ನು ಪ್ರಧಾನಿ ಪುರುಚ್ಛಿಸಿದರು.

ಇನ್ನು ‘ಮನ್ ಕಿ ಬಾತ್’ನಲ್ಲಿ ಗಣರಾಜ್ಯೋತ್ಸವ ಮತ್ತು ಮುಂಬರುವ ಲೋಕಸಭೆ ಚುನಾವಣೆಗಾಗಿ ವೋಟರ್ ರೆಜಿಸ್ಟ್ರೇಶನ್ ಆಂದೋಲನ ಆರಂಭಿಸುವ ಕುರಿತು ಮಾತನಾಡಿದರು.