Asianet Suvarna News Asianet Suvarna News

ಮೂರೇ ಹುಲಿಯಿಂದ ಕರ್ನಾಟಕಕ್ಕೆ ನಂ 1 ಸ್ಥಾನ ಮಿಸ್!

ದೇಶದಲ್ಲಿ ಹುಲಿಗಳ ಸಂಖ್ಯೆ ಡಬಲ್‌ | ದೇಶದಲ್ಲಿ ಈಗ 2967 ಹುಲಿ | ಹುಲಿ ಗಣತಿ ವರದಿ ಬಿಡುಗಡೆ |  2ನೇ ಸ್ಥಾನಕ್ಕೆ ಜಾರಿದ ಕರ್ನಾಟಕ |  2967: ದೇಶದಲ್ಲಿ ಸದ್ಯ ಇರುವ ವ್ಯಾಘ್ರಗಳ ಸಂಖ್ಯೆ | 3890: ಜಗತ್ತಿನಲ್ಲಿರುವ ಒಟ್ಟು ಹುಲಿಗಳ ಸಂಖ್ಯೆ

PM Modi releases census of India tiger population in All India Tiger Estimation Report
Author
Bengaluru, First Published Jul 30, 2019, 10:47 AM IST

ಶರವೇಗದ ನಗರೀಕರಣದಿಂದಾಗಿ ಕಾಡು ನಶಿಸುತ್ತಿದೆ, ಪ್ರಾಣಿಗಳು ಆವಾಸಸ್ಥಾನ ಕಳೆದುಕೊಳ್ಳುತ್ತಿವೆ ಎಂಬ ಕಳವಳದ ನಡುವೆಯೇ ಹುಲಿಗಳ ಸಂಖ್ಯೆ ದೇಶದಲ್ಲಿ ಡಬಲ್‌ ಆಗಿರುವ ಖುಷಿಯ ಸಮಾಚಾರ ಸಿಕ್ಕಿದೆ. ಪ್ರತಿ 4 ವರ್ಷಕ್ಕೊಮ್ಮೆ ನಡೆಯುವ ಹುಲಿ ಗಣತಿಯ ವರದಿ ಬಿಡುಗಡೆಯಾಗಿದ್ದು, ದೇಶದಲ್ಲಿ ಈಗ 2967 ವ್ಯಾಘ್ರಗಳು ಇವೆ ಎಂಬ ಅಂಕಿ-ಅಂಶ ಲಭ್ಯವಾಗಿದೆ.

2006 ರಲ್ಲಿ ದೇಶದಲ್ಲಿ ಒಟ್ಟು 1411 ಹುಲಿಗಳು ಇದ್ದವು. ಅದಕ್ಕೆ ಹೋಲಿಸಿದರೆ ಕೇವಲ 12 ವರ್ಷಗಳಲ್ಲಿ ವ್ಯಾಘ್ರ ಸಂತತಿಯ ಸಂಖ್ಯೆ ದ್ವಿಗುಣವಾಗಿದೆ. ಅಖಿಲ ಭಾರತ ಹುಲಿ ಗಣತಿ ವರದಿ- 2018ನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬಿಡುಗಡೆ ಮಾಡಿದರು.

ಮೂರೇ ಹುಲಿಯಿಂದ ಕರ್ನಾಟಕಕ್ಕೆ ನಂ.1 ಸ್ಥಾನ ಮಿಸ್‌

ದೇಶದಲ್ಲಿ ಹುಲಿ ಸಂತತಿ ಹೆಚ್ಚಳವಾಗಿರುವ ಸಂತಸದ ಸುದ್ದಿಯ ನಡುವೆಯೇ, ಹುಲಿಗಳ ಸಂಖ್ಯೆಯಲ್ಲಿ ಪ್ರಥಮ ಸ್ಥಾನದಲ್ಲಿ ವಿರಾಜಮಾನವಾಗಿದ್ದ ಕರ್ನಾಟಕ 2ನೇ ಸ್ಥಾನಕ್ಕೆ ಕುಸಿದಿದೆ. ಅದೂ ಕೇವಲ 3 ಹುಲಿಗಳ ಕೊರತೆಯಿಂದ. ಕರ್ನಾಟಕದಲ್ಲಿ 524 ಹುಲಿಗಳು ಇದ್ದರೆ, 526 ಹುಲಿಗಳೊಂದಿಗೆ ಮಧ್ಯಪ್ರದೇಶ ಪ್ರಥಮ ಸ್ಥಾನಕ್ಕೇರಿದೆ. 3ನೇ ಸ್ಥಾನದಲ್ಲಿರುವ ಉತ್ತರಾಖಂಡದಲ್ಲಿ 442 ಹುಲಿಗಳಿರುವುದು ಪತ್ತೆಯಾಗಿದೆ.

ಹುಲಿಗಳ ಹೆಚ್ಚಳಕ್ಕೆ ಕಾರಣ ಏನು?

ಹುಲಿ ಬೇಟೆಗಾರರ ನಿಯಂತ್ರಣ

ಕಾಡಿನ ರಕ್ಷಣೆ

ದಂಡಿಸುವ ಕಾನೂನು

ವಿಶೇಷ ರಕ್ಷಣಾ ಪಡೆ

ಹುಲಿ ವಾಸಸ್ಥಳ ವಿಸ್ತರಣೆ

4 ವರ್ಷಕ್ಕೊಮ್ಮೆ ನಡೆಯುವ ಗಣತಿ

10 ವರ್ಷಕ್ಕೊಮ್ಮೆ ಜನಗಣತಿ ಮಾಡಿದಂತೆ ಕಾಡಿನಲ್ಲೂ ಪ್ರತಿ 4 ವರ್ಷಕ್ಕೊಮ್ಮೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹುಲಿ ಗಣತಿ ನಡೆಸುತ್ತದೆ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಹುಲಿ ಗಣತಿ ಶುರುವಾಗಿದ್ದು 2006ರಲ್ಲಿ. ಆ ವರ್ಷ ಭಾರತದಲ್ಲಿ ಕೇವಲ 1411 ಹುಲಿಗಳಿದ್ದವು.

2010 ರಲ್ಲಿ ಅವುಗಳ ಸಂಖ್ಯೆ 1706 ಕ್ಕೆ ಏರಿತು. 2014 ಕ್ಕೆ ಅದು 2226 ಕ್ಕೂ, ಈಗ 2018 ರಲ್ಲಿ 2967 ಕ್ಕೂ ಏರಿದೆ. ಹುಲಿಗಳ ಸಂಖ್ಯೆ ಪತ್ತೆಹಚ್ಚಲು, ಅದರ ಸಂರಕ್ಷಣೆ, ಹುಲಿಗಳ ಅವನತಿ ಮತ್ತು ಬೆಳವಣಿಗೆ ಬಗ್ಗೆ ಸಂಶೋಧನೆ ನಡೆಸುವ ದೃಷ್ಟಿಯಿಂದ ಗಣತಿ ಕೈಗೊಳ್ಳಲಾಗುತ್ತದೆ.

ಹುಲಿ ಗಣತಿ ನಡೆದಿದ್ದು ಹೇಗೆ?

ಹುಲಿಗಣತಿಗೆ ಭಾರತದಲ್ಲಿ ನಡೆಸುವ ಪ್ರಕ್ರಿಯೆ, ಪ್ರಯತ್ನ ಬೇರೆ ಯಾವ ದೇಶದಲ್ಲೂ ನಡೆಯುವುದಿಲ್ಲ. ಹುಲಿಯ ಪಾದಗಳು ತುಂಬ ಮೃದುವಾದ್ದರಿಂದ ಅದು ಕಾಲುದಾರಿಯಲ್ಲೆ ಹೆಚ್ಚು ತಿರುಗಲು ಬಯಸುತ್ತದೆ. ಅಗತ್ಯ ಬಿದ್ದಾಗ ಮಾತ್ರ ರಿಸ್ಕ್‌ ತೆಗೆದುಕೊಳ್ಳುತ್ತದೆ. ಹಾಗಾಗಿ ಮೊದಲಿಗೆ ಸಾಂಪ್ರದಾಯಿಕ ವಿಧಾನದ ಮೂಲಕ ಹುಲಿಗಣತಿ ನಡೆಸಲಾಗುತ್ತಿತ್ತು. ಅಂದರೆ ಹಜ್ಜೆ ಗುರುತು, ಲದ್ದಿ, ಉಜ್ಜಿದ ಗುರುತು, ಗರ್ಜನೆ ಮುಂತಾದವುಗಳ ಮೂಲಕ ಸಂಕ್ಷಿಪ್ತ ಮಾಹಿತಿ ದಾಖಲು ಮಾಡಲಾಗುತ್ತಿತ್ತು.

ನಂತರದಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಇನ್ನಷ್ಟುವೈಜ್ಞಾನಿಕವಾಗಿ ಗಣತಿ ಮಾಡಲು ಪ್ರಾರಂಭಿಸಲಾಯಿತು. ಅಂದರೆ ಜಿಪಿಎಸ್‌, ಬಯೋಲಾಜಿಕಲ್‌ ಇಂಡಿಕೇಶನ್‌, ಕ್ಯಾಮೆರಾ ಟ್ರಾಪ್‌, ಫೋಟೋಗ್ರಾಫ್‌್ಸ ಮೂಲಕ ಮತ್ತಷ್ಟುನಿಖರ ಗಣತಿ ಮಾಡಲಾಗುತ್ತಿದೆ.

ಮೊದಲಿಗೆ ಹೆಜ್ಜೆ ಗುರುತುಗಳನ್ನು ಪರೀಕ್ಷಿಸಿ, ಮತ್ತಷ್ಟುನಿಖರ ಮಾಹಿತಿಗಾಗಿ ಹುಲಿಗಳು ಹೆಚ್ಚಾಗಿ ಓಡಾಡುವ ಸ್ಥಳಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಈ ಕ್ಯಾಮೆರಾದಲ್ಲಿ ಸೆರೆಯಾದ ಪೋಟೋಗಳನ್ನು ಸ್ಪೆಷಲ್‌ ಸಾಫ್ಟ್‌ವೇರ್‌ಗೆ ಹಾಕಲಾಗುತ್ತದೆ. ಇದು ವಿವಿಧ ಆ್ಯಂಗಲ್‌ಗಳಲ್ಲಿ ಹುಲಿಗಳ ಚಿತ್ರವನ್ನು ಪರೀಕ್ಷಿಸಿ ಒಂದೇ ಹುಲಿಯ ಚಿತ್ರಗಳು ಎರಡೆರಡು ಬಾರಿ ಎಣಿಕೆಯಾಗದಂತೆ ನಿಖರವಾದ ಗಣತಿಗೆ ನೆರವಾಗುತ್ತದೆ. ಕ್ಯಾಮೆರಾಗಳು ಬಳಕೆಯಾಗದ ಸ್ಥಳಗಳಲ್ಲಿ ಹುಲಿಗಳ ಹೆಜ್ಜೆಗುರುತು, ಲದ್ದಿ ಮತ್ತಿತರ ಅಂಶಗಳನ್ನಿಟ್ಟುಕೊಂಡು ಡಿಎನ್‌ಎ ಪರೀಕ್ಷೆ ನಡೆಸಲಾಗುತ್ತದೆ.

ಎನ್‌ಜಿಸಿಯಲ್ಲಿ ಆ.7ಕ್ಕೆ ಹುಲಿಗಣತಿ ಸಾಕ್ಷ್ಯಚಿತ್ರ

ಭಾರತದಲ್ಲಿ ಪ್ರಸಕ್ತ ವರ್ಷದ ಹುಲಿ ಗಣತಿ ವರದಿ ಬಿಡುಗಡೆಯಾಗಿದೆ. ಆದರೆ ಹುಲಿ ಗಣತಿ ಮಾಡುವುದು ಹೇಗೆ ಎನ್ನುವುದೇ ಕುತೂಹಲದ ವಿಷಯ. ಈ ಹಿನ್ನೆಲೆಯಲ್ಲಿ ನ್ಯಾಷನಲ್‌ ಜಿಯೋಗ್ರಫಿಕ್‌ ಚಾನೆಲ್‌ ಹುಲಿ ಗಣತಿ ಹಿಂದಿನ ಶ್ರಮ ಏನು, ತಾಂತ್ರಿಕತೆ ಏನು ಎಂಬ ಬಗ್ಗೆ ಆಗಸ್ಟ್‌ 7ರಂದು ಸಾಕ್ಷ್ಯಚಿತ್ರ ಪ್ರಸಾರ ಮಾಡುತ್ತಿದೆ.

ಅದರಲ್ಲಿ ಹುಲಿ ಗಣತಿ ಮಾಡುವಾಗ ಅರಣ್ಯಾಧಿಕಾರಿಗಳ ಪಾಲ್ಗೊಳ್ಳುವಿಕೆ ಹೇಗಿರುತ್ತದೆ, ಹುಲಿಯ ಹೆಜ್ಜೆ ಗುರುತು, ಲದ್ದಿ, ಉಜ್ಜಿದ ಗುರುತು, ಗರ್ಜನೆ ಮುಂತಾದವುಗಳ ಆಧಾರದಲ್ಲಿ ಹುಲಿಗಳ ಲೆಕ್ಕ ಹಾಕುವುದು ಹೇಗೆ, ಮತ್ತು ಇತ್ತೀಚಿನ ದಿನಗಳಲ್ಲಿ ಕ್ಯಾಮೆರಾ ಹೇಗೆ ಬಳಕೆಯಾಗುತ್ತಿದೆ ಎಂಬ ಕುತೂಹಲ ಕಾರಿ ಮಾಹಿತಿಯನ್ನು ಒಳಗೊಂಡಿರುತ್ತದೆ.

ಭಾರತದಲ್ಲಿವೆ 50 ಹುಲಿ ಮೀಸಲು ಅರಣ್ಯ

ಭಾರತದಲ್ಲಿ ಒಟ್ಟು 50 ಹುಲಿ ಸಂರಕ್ಷಣಾಲಯಗಳಿವೆ. ಅತ್ಯಂತ ಹಳೆಯ ಹುಲಿ ಸಂರಕ್ಷಣಾ ವಲಯ ಎಂದರೆ ಕಾರ್ಬೆಟ್‌ ಹುಲಿ ಸಂರಕ್ಷಣಾಲಯ. 1973ರ ‘ಟೈಗರ್‌ ಪ್ರಾಜೆಕ್ಟ್’ ಯೋಜನೆಯಡಿ ಇದನ್ನು ಹುಲಿ ಮೀಸಲು ಪ್ರದೇಶ ಎಂದು ಘೋಷಿಸಲಾಯಿತು. ಇನ್ನು ಕಮ್‌ಲಾಂಗ್‌ ಹುಲಿ ಸಂರಕ್ಷಣಾಲಯ ಇತ್ತೀಚೆಗೆ ಘೋಷಣೆಯಾದ ಹುಲಿ ಮೀಸಲು ಪ್ರದೇಶ. ಇದನ್ನು 2018ರಲ್ಲಿ ಘೋಷಿಸಲಾಯಿತು. ಸದ್ಯ ಹುಲಿ ಸಂಖ್ಯೆಯಲ್ಲಿ ನಂಬರ್‌ 1 ಸ್ಥಾನ ಪಡೆದಿರುವ ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 6 ಹುಲಿ ಸಂರಕ್ಷಣಾಲಯಗಳಿವೆ.

2022ರೊಳಗೆ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿ ಹಾಕಿಕೊಳ್ಳಲಾಗಿತ್ತು. 4 ವರ್ಷ ಮುಂಚಿತವಾಗಿಯೇ ನಾವು ಆ ಗುರಿಯನ್ನು ತಲುಪಿದ್ದೇವೆ. ಭಾರತದಲ್ಲಿ ಹುಲಿ ಸಂರಕ್ಷಣೆ ‘ಏಕ್‌ ಥಾ ಟೈಗರ್‌’ (ಈ ಹಿಂದೆ ಹುಲಿ ಇತ್ತು)ನಿಂದ ಆರಂಭವಾಗಿ ‘ಟೈಗರ್‌ ಜಿಂದಾ ಹೇ’ (ಹುಲಿ ಬದುಕಿದೆ) ಎಂಬಲ್ಲಿಗೆ ತಲುಪಿದೆ. ಇದು ಇಲ್ಲಿಗೇ ಮುಕ್ತಾಯವಾಗಬಾರದು.

ನರೇಂದ್ರ ಮೋದಿ, ಪ್ರಧಾನಿ

 

Follow Us:
Download App:
  • android
  • ios