ನವದೆಹಲಿ[ನ.07]: ನಾಡಿನೆಲ್ಲೆಡೆ ಜನರು ದೀಪಾವಳಿ ಹಬ್ಬವನ್ನು ಸಂಭ್ರಮ- ಸಡಗರದಿಂದ ಆಚರಿಸುತ್ತಿದ್ದಾರೆ. ಹೀಗಿರುವಾಗ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹೂ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಭಾರತೀಯರಿಗೆ ಹಿಂದಿಯಲ್ಲಿ ಟ್ವೀಟ್‌ ಮಾಡುತ್ತಾ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಇಸ್ರೇಲ್ ಪ್ರಧಾನಿ ನೆತನ್ಯಾಹೂ 'ಇಸ್ರೇಲ್ ಜನರ ಪರವಾಗಿ ನಾನು ನನ್ನ ಆತ್ಮೀಯ ಗೆಳೆಯ ನರೇಂದ್ರ ಮೋದಿ ಹಾಗೂ ಭಾರತೀಯ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಲು ಇಚ್ಛಿಸುತ್ತೇನೆ. ಬೆಳಕಿನಿಂದ ಕೂಡಿದ ಈ ಹಬ್ಬದಿಂದ ಖುಷಿ ಹಾಗೂ ಸಮೃದ್ಧಿ ನಿಮ್ಮದಾಗಲಿ. ಈ ಟ್ವೀಟ್‌ಗೆ ನೀವು ಪ್ರತಿಕ್ರಿಯಿಸಿದರೆ ನನಗೆ ಬಹಳ ಖುಷಿಯಾಗಲಿದೆ' ಎಂದಿದ್ದಾರೆ.

ಇಸ್ರೇಲ್ ಪ್ರಧಾನಿಯ ಈ ಟ್ವೀಟ್‌ಗೆ ಹಿಬ್ರೂ ಭಾಷೆಯಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ 'ಬೀಬಿ, ಪ್ರಿಯ ಮಿತ್ರ... ದೀಪಾವಳಿ ಹಬ್ಬದ ಶುಭಾಶಯಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ಪ್ರತಿವರ್ಷ ನಾನು ಗಡಿ ಭಾಗಕ್ಕೆ ತೆರಳಿ ನನ್ನ ದೇಶದ ಯೋಧರನ್ನು ಅಚ್ಚರಿಗೊಳಿಸುತ್ತೇನೆ. ಈ ಬಾರಿಯೂ ದೀಪಾವಳಿಯನ್ನು ವೀರ ಯೋಧರೊಂದಿಗೆ ಆಚರಿಸುತ್ತೇನೆ. ಅವರೊಂದಿಗೆ ಸಮಯ ಕಳೆಯುವುದೇ ವಿಶೇಷ' ಎಂದಿದ್ದಾರೆ. ಅಲ್ಲದೇ ಬುಧವಾರ ಸಂಜೆ ಫೋಟೋಗಳನ್ನು ಶೇರ್ ಮಾಡುವುದಾಗಿ ತಿಳಿಸಿದ್ದಾರೆ. 

ಸೋಮವಾರದಂದು ಸರ್ಕಾರವು ಬಿಡುಗಡೆಗೊಳಿಸಿದ್ದ ಕಾರ್ಯಸೂಚಿ ಪಟ್ಟಿಯಲ್ಲಿ, ಪ್ರಧಾನಿ ಮೋದಿ ಬುಧವಾರದಂದು ಹಿಮಾಲಯದ ಎತ್ತರ ಪ್ರದೇಶದಲ್ಲಿರುವ ಬಾಬಾ ಕೇದಾರ ಧಾಮದಲ್ಲಿ ಪೂಜೆ ನೆರವೇರಿಸುವುದರೊಂದಿಗೆ ಕೇದಾರಪುರಿಯಲ್ಲಿ ನಡೆಯುತ್ತಿರುವ ಪುನರ್ ನಿರ್ಮಾಣ ಕಾರ್ಯದ ಸಮೀಕ್ಷೆ ನಡೆಸಲಿದ್ದಾರೆಂದು ತಿಳಿದು ಬಂದಿತ್ತು.

ಯೋಧರೊಂದಿಗೆ ಮೋದಿ ದೀಪಾವಳಿ

ಪ್ರಧಾನ ಮಂತ್ರಿಯಾದ ಬಳಿಕ ಮೋದಿ ಪ್ರತಿ ವರ್ಷ ದೀಪಾವಳಿಯನ್ನು ದೇಶ ಕಾಯುವ ಯೋಧರೊಂದಿಗೆ ಆಚರಿಸುತ್ತಾ ಬಂದಿದ್ದಾರೆ. 2015ರಲ್ಲಿ ಪಂಜಾಬ್ ಗಡಿ ಭಾಗಕ್ಕೆ ತೆರಳಿದ್ದರೆ, 2016ರಲ್ಲಿ ಇಂಡೋ- ಟಿಬೆಟ್ ಗಡಿ ಪೊಲೀಸರೊಂದಿಗೆ ಸಿಹಿ ಹಂಚಿ ಹಬ್ಬ ಆಚರಿಸಿದ್ದರು. ಕಳೆದ ವರ್ಷ ಜಮ್ಮು ಕಾಶ್ಮೀರಕ್ಕೆ ತೆರಳಿ ಜವಾನರನ್ನು ಅಚ್ಚರಿಗೀಡು ಮಾಡಿದ್ದರು.