ನವದೆಹಲಿ[ಸೆ.06]: ಆಗಸದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾರುವ ವೇಳೆ ಶತ್ರು ದೇಶವೊಂದು ಉದ್ದೇಶಪೂರ್ವಕವಾಗಿ ದಾಳಿ ನಡೆಸಿದರೂ, ಅದರಿಂದ ತಪ್ಪಿಸಕೊಳ್ಳಬಲ್ಲ ಸಾಮರ್ಥ್ಯ ಹೊಂದಿರುವ ಅತ್ಯಾಧುನಿಕ ವಿಮಾನವೊಂದು ಮುಂದಿನ ವರ್ಷದ ಜೂನ್‌ ವೇಳೆ ಭಾರತದ ಕೈ ಸೇರುವ ಸಾಧ್ಯತೆ ಇದೆ.

ಅಮೆರಿಕ ಅಧ್ಯಕ್ಷರು ತಮ್ಮ ವಿದೇಶಕ್ಕೆ ಪ್ರವಾಸಕ್ಕೆ ಬಳಸುವ ವಿಶ್ವದ ಅತ್ಯಂತ ಸುರಕ್ಷಿತ, ಅತ್ಯಾಧುನಿಕ ವಿಮಾನವಾದ ಏರ್‌ಫೋ​ರ್‍ಸ್ರ್‍ 1 ಮಾದರಿಯಲ್ಲೇ ಏರ್‌ ಇಂಡಿಯಾ 1 ವಿಮಾನವನ್ನು ಸಿದ್ಧಗೊಳಿಸಲಾಗುತ್ತಿದ್ದು, ಅದು 2020ರ ಜೂನ್‌ ವೇಳೆಗೆ ಮೋದಿ ಅವರಿಗೆ ಸಂಚಾರಕ್ಕೆ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಭಾರತದ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಿಗಳ ಬಳಕೆಗೆಂದು ಒಟ್ಟು 3 ವಿಶೇಷ ವಿಮಾನಗಳಿಗಾಗಿ ಭಾರತ ಸರ್ಕಾರವು, ಅಮೆರಿಕದ ಬೋಯಿಂಗ್‌ ಕಂಪನಿಗೆ ಬೇಡಿಕೆ ಇಟ್ಟಿತ್ತು. ಈ ಪೈಕಿ ಮೊದಲ ವಿಮಾನ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಬೋಯಿಂಗ್‌ ಕಂಪನಿಯ ಈ 777 ವಿಮಾನದಲ್ಲಿ ವಿಶಾಲವಾದ ಸಭಾ ಕೊಠಡಿ, ವಿಶ್ರಾಂತಿ ಕೊಠಡಿ, ಅಧಿಕಾರಿಗಳಿಗೆ ಪ್ರತ್ಯೇಕ ಕೊಠಡಿ, ವಿಶೇಷ ಸಂಪರ್ಕ ಸಾಧನಗಳು ಇರುತ್ತವೆ. ಜೊತೆಗೆ ಇನಾ್ೊ್ರರೆಡ್‌ಪ್ರತಿದಾಳಿ ಉಪಕರಣಗಳು, ಸಮಗ್ರ ಎಲೆಕ್ಟ್ರಾನಿಕ್‌ ರಕ್ಷಣಾ ಯುದ್ದೋಪಕರಣಗಳು ಮತ್ತು ಪ್ರತಿದಾಳಿ ವ್ಯವಸ್ಥೆಗಳು ಇರುತ್ತವೆ. ಈ ಉಪಕರಣಗಳು ವಿಮಾನದ ಮೇಲೆ ಎರಗಿಬರಬಹುದಾದ ಕ್ಷಿಪಣಿಗಳ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುವ ಮೂಲಕ ದಾಳಿ ತಡೆಯುತ್ತವೆ. ಅಲ್ಲದೆ ಅಗತ್ಯ ಬಿದ್ದರೆ, ವಿಮಾನದೊಳಗಿನ ಯಾವುದೇ ಸಿಬ್ಬಂದಿಯ ಸೂಚನೆ ಇಲ್ಲದ ಹೊರತಾಗಿಯೂ ಕ್ಷಿಪಣಿಯನ್ನು ಹೊಡೆದುರುಳಿಸುವ ವ್ಯವಸ್ಥೆ ಒಳಗೊಂಡಿರುತ್ತವೆ.

1500 ಕೋಟಿ ರು. ವೆಚ್ಚ

ಭಾರತದ ಜೊತೆಗಿನ ಸಂಬಂಧ ಸುಧಾರಣೆ ಹಿನ್ನೆಲೆಯಲ್ಲಿ 2019ರ ಫೆಬ್ರುವರಿ ತಿಂಗಳಲ್ಲಷ್ಟೇ ಅಮೆರಿಕವು ಭಾರತಕ್ಕೆ, ವಿಮಾನದಲ್ಲಿ ಅಳವಡಿಸಬಹುದಾದ ತಂತ್ರಜ್ಞಾನವನ್ನು ಮಾರಾಟ ಮಾಡಲು ಸಮ್ಮತಿಸಿತ್ತು. ಈ ವಿಶೇಷ ವಿಮಾನಕ್ಕೆ ಅಂದಾಜು 1500 ಕೋಟಿ ರು. ವೆಚ್ಚವಾಗಲಿದೆ.

ದೂರ ಸಾಗುವ ಸಾಮರ್ಥ್ಯ

ಹಾಲಿ ಭಾರತದ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿಗಳು ಬಳಸುವ ವಿಮಾನವನ್ನು ಅತ್ಯಂತ ಸುದೀರ್ಘ ದೂರಕ್ಕೆ ಇಂಧನ ಮರುಭರ್ತಿ ಮಾಡದೇ ಹಾರಿಸಲಾಗದು. ಆದರೆ ಹೊಸ 777 ವಿಮಾನಕ್ಕೆ ಒಮ್ಮೆ ಇಂಧನ ತುಂಬಿಸಿದರೆ ಭಾರತದಿಂದ ಎಲ್ಲೂ ಇಳಿಸಿದರೆ ಅಮೆರಿಕದವರೆಗೆ ಸಂಚಾರ ನಡೆಸಬಹುದು.

ಬಹಳ ಹಳೆಯ ವಿಮಾನ

ಹಾಲಿ ಭಾರತದ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಬಳಸುವ ವಿಮಾನ 2 ದಶಕಗಳಿಗೂ ಹಳೆಯದ್ದು. ಇವುಗಳ ಯಾವುದೇ ಸ್ಥಳದಲ್ಲಿ ರಿಪೇರಿಗೆ ಬರುವ ಅಪಾಯ ಇರುತ್ತದೆ. ಜೊತೆಗೆ ಇದರಲ್ಲಿ ಯಾವುದೇ ರಕ್ಷಣಾ ವ್ಯವಸ್ಥೆ ಇರುವುದಿಲ್ಲ. ಗಣ್ಯರು ಬಳಸದ ಸಮಯದಲ್ಲಿ ಈ ವಿಮಾನಗಳನ್ನು ಏರ್‌ಇಂಡಿಯಾ ತನ್ನ ಸಾಮಾನ್ಯ ಹಾರಾಟಕ್ಕೆ ಬಳಸುತ್ತದೆ.