ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ಪರಿವರ್ತನಾ ಯಾತ್ರೆ ಜ.28 ರಂದು ಮುಕ್ತಾಯವಾಗಲಿದ್ದು, ಸಮಾರೋಪ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಆ ಸಂದರ್ಭದಲ್ಲಿ ರೈತರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಕುರಿತು ಸ್ಪಷ್ಟನೆ ನೀಡಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರು (ಡಿ.23): ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ಪರಿವರ್ತನಾ ಯಾತ್ರೆ ಜ.28 ರಂದು ಮುಕ್ತಾಯವಾಗಲಿದ್ದು, ಸಮಾರೋಪ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಆ ಸಂದರ್ಭದಲ್ಲಿ ರೈತರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಕುರಿತು ಸ್ಪಷ್ಟನೆ ನೀಡಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಎಫ್.ಎಂ. ಡಬಾಲಿ ಹೈಸ್ಕೂಲ್ ಮೈದಾ ನದಲ್ಲಿ ಏರ್ಪಡಿಸಿದ್ದ ನವಕರ್ನಾಟಕ ನಿರ್ಮಾ ಣದ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿ, ಪ್ರಧಾನಿ ಅಂದು ರೈತರ ಸಾಲ ಮನ್ನಾ ಕುರಿತು ಮಾಹಿತಿ ನೀಡಲಿದ್ದಾರೆ ಎಂದರು. ‘ನೀನು ರಾಜೀನಾಮೆ ಕೊಟ್ಟು ಹೋಗು, ನಾವು ಏನು ಮಾಡುತ್ತೇವೆ ನೋಡು’ ಎಂದು ಸಿಎಂಗೆ ಏಕ ವಚನದಲ್ಲಿ ಸವಾಲು ಹಾಕಿದ ಅವರು, ಮಹದಾಯಿ ಕುರಿತು ಪ್ರಸ್ತಾಪಿಸಿ ತಾವು ಯಾವುದೇ ರಾಜಕೀಯ ಹಿತಾಸಕ್ತಿ ಯಿಂದ ಮಹದಾಯಿಗಾಗಿ ಪ್ರಯತ್ನಿಸುತ್ತಿಲ್ಲ. ಟೀಕಿಸುವವರು ಎಚ್ಚರದಿಂದಿರಬೇಕು ಎಂದರು.

ಒಂದೇ ಜಿಲ್ಲೆಯಲ್ಲಿ ಇಂದು ಸಿದ್ದು, ಬಿಎಸ್‌ವೈ ರ‍್ಯಾಲಿ ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ಸಾಧನೆ ಬಿಂಬಿಸುವ ‘ಸಾಧನಾ ಸಮಾವೇಶ’ ಹಾಗೂ ಚುನಾ ವಣೆಗೆ ಪೂರ್ವಭಾವಿಯಾಗಿ ಬಿಜೆಪಿ ಶುರುಮಾಡಿರುವ ಪರಿವರ್ತನಾ ಯಾತ್ರೆ ಎರಡೂ ಒಂದೇ ದಿನ ಜಿಲ್ಲೆಯಲ್ಲಿ ನಡೆಯುತ್ತಿವೆ.

ಜಿಲ್ಲೆಯು ರಾಜಕೀಯ ಟೀಕೆ, ಆರೋಪಗಳಿಗೆ ಸಾಕ್ಷಿಯಾಗಲಿದೆ. ಇದರೊಂದಿಗೆ ಎರಡೂ ಪಕ್ಷಗಳ ಕಾರ್ಯಕ್ರಮಗಳಿಂದ ಹೊಸ ಕಳೆ ಬಂದಂತಾಗಿದೆ. ಡಿ.23ರಂದು ಮುನ್ಸಿಪಲ್ ಮೈದಾನದಲ್ಲಿ ಸರ್ಕಾರದ ಸಾಧನಾ ಸಮಾವೇಶ ಆಯೋಜಿಸಲಾಗಿದೆ. ರಾಜ್ಯಾದ್ಯಂತ ಸಂಚರಿಸುತ್ತಿರುವ ಬಿಜೆಪಿಯ ಪರಿವರ್ತನಾ ಯಾತ್ರೆಯುಶನಿವಾರ ಜಿಲ್ಲೆ ಪ್ರವೇಶಿಸುತ್ತಿದೆ. ಶಿಗ್ಗಾಂವಿ ಮತ್ತು ಹಾನಗಲ್ಲನಲ್ಲಿ ಶನಿವಾರ ಪರಿವರ್ತನಾ ಯಾತ್ರೆ ನಡೆಯಲಿದೆ.

ಮಹದಾಯಿ ಬಗ್ಗೆ ಬಿಜೆಪಿ ಡಬಲ್ ಗೇಮ್ ಮಹದಾಯಿ ನೀರು ಹಂಚಿಕೆ ವಿಷಯದಲ್ಲಿ ಡಬಲ್ ಗೇಮ್ ರಾಜಕೀಯ ಮಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತವರ ಕಂಪನಿ ದೊಡ್ಡ ನಾಟಕವಾಡುತ್ತಿದೆ ಎಂದು ಬಿಜೆಪಿ ನಡೆಯ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಹದಾಯಿ ವಿಚಾರದಲ್ಲಿ ತೀರ್ಪು ಕೊಡಲು ಅಮಿತ್ ಶಾ ಯಾರು? ಯಡಿಯೂರಪ್ಪ ಯಾರು ಎಂದೂ ಅವರು ಖಾರವಾಗಿ ಪ್ರಶ್ನಿಸಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಬರೆದ ಪತ್ರವನ್ನಿಟ್ಟುಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆ್ಯಂಡ್ ಕಂಪನಿ ದೊಡ್ಡ ನಾಟಕ ಮಾಡುತ್ತಿದೆ. ರಾಜ್ಯವನ್ನು ಬಿಜೆಪಿ ಲಘುವಾಗಿ ಪರಿಗಣಿಸಿದೆ. ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ಕಳಸಾ-ಬಂಡೂರಿ ನಾಲೆ ಕಾಮಗಾರಿ ಸರಿಯಾಗಿ ನಡೆಯಬೇಕು ಎಂಬುದಾಗಿ ಸಚಿವ ಸಂಪುಟದಲ್ಲಿ ಹೇಳಿದಾಗ ಬಿಜೆಪಿಯವರು ಯೋಜನೆಯನ್ನು ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ, ಯೋಜನೆಯಿಂದ ನಮಗೇನು ಪ್ರಯೋಜನ ಎಂಬುದಾಗಿ ಕೇಳಿದ್ದರು. ಇಂತಹ ಹೇಳಿಕೆ ನೀಡಿರುವುದು ಸುಳ್ಳಾ ಎಂಬುದನ್ನು ಬಿಜೆಪಿಯ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಈಶ್ವರಪ್ಪ ಹೇಳಬೇಕು. ಇದೀಗ ಮಹದಾಯಿ ವಿಷಯದಲ್ಲಿ ಡೋಂಗಿ ರಾಜಕಾರಣ ಹಾಗೂ ಡಬಲ್ ಗೇಮ್ ರಾಜಕೀಯ ಮಾಡುತ್ತಿದ್ದಾರೆ ಎಂದರು.

ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತ ಪಡೆಯಲು ಮಹದಾಯಿ ನೀರು ಹಂಚಿಕೆ ವಿಚಾರದಲ್ಲಿ ಯಡಿಯೂರಪ್ಪ ಅವರು ಉತ್ತರ ಕರ್ನಾಟಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಯಡಿಯೂರಪ್ಪ ಅವರ ನಾಟಕಕ್ಕೆ ಜನರು ಮರುಳಾಗಬಾರದು. ಮತ್ತೊಮ್ಮೆ ಜನರು ಬಿಜೆಪಿಯಿಂದ ಮೋಸ ಹೋಗಬಾರದು ಎಂದು ಮನವಿ ಮಾಡಿದ ಅವರು, ಯಡಿಯೂರಪ್ಪ ಅವರು ಹೋಗುವ ಕಡೆಗಳಲ್ಲಿ ರಕ್ತ ಕೊಡುತ್ತೇನೆ ಎಂದು ಭಾಷಣ ಮಾಡುತ್ತಾರೆ. ಅವರ ರಕ್ತ ಯಾರಿಗೆ ಬೇಕು? ಜನರಿಗೆ ಬೇಕಾಗಿರುವುದು ನೀರು ಎಂದು ವ್ಯಂಗ್ಯವಾಡಿದರು.

ಕಳೆದ ಎರಡು ವರ್ಷಗಳಲ್ಲಿ ರಾಜ್ಯದ ಮುಖ್ಯಮಂತ್ರಿಗಳು (ಸಿದ್ದರಾಮಯ್ಯ) ಕೇಂದ್ರಕ್ಕೆ ಹಲವು ಬಾರಿ ಪತ್ರ ಬರೆದಿದ್ದಾರೆ. ಪತ್ರಗಳಿಗೆ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ. ನಿಯೋಗಗಳು ಹೋದರೂ ಯಾವುದೇ ಪ್ರಯೋಜನವಾಗಿಲ್ಲ. ಈ ನಡುವೆ, ಗೋವಾ ಮುಖ್ಯಮಂತ್ರಿ ಮನೋಹರ್ ಪರ‌್ರಿಕರ್ ಅವರು ಕಾಂಗ್ರೆಸ್ಸನ್ನು ನಂಬುವುದಿಲ್ಲ ಎನ್ನುವ ಮೂಲಕ ರಾಜ್ಯ ಸರ್ಕಾರದ ವಿಶ್ವಾಸವನ್ನು ಪ್ರಶ್ನಿಸಿದ್ದಾರೆ. ಚುನಾವಣೆ ಬಳಿಕ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ. ಅಷ್ಟರಲ್ಲಿ ನ್ಯಾಯಾಧಿಕರಣವೇ ತೀರ್ಪು ನೀಡಲಿದೆ. ನ್ಯಾಯಾಧಿಕರಣ ತೀರ್ಪು ಬಂದ ಬಳಿಕ ಮಾತುಕತೆ ನಡೆದರೆ ಏನು ಪ್ರಯೋಜನ?

ವಿವಾದ ಕುರಿತು ಕೇಂದ್ರ ಸರ್ಕಾರದಲ್ಲಿ ತೀರ್ಮಾನವಾಗಬೇಕು ಮತ್ತು ಸುಪ್ರೀಂಕೋರ್ಟ್ ಮುಂದೆ ಎರಡು ರಾಜ್ಯಗಳು ಅರ್ಜಿ ಹಾಕಬೇಕು. ನಂತರ ಸಮಸ್ಯೆಗೆ ಪರಿಹಾರ ಸಿಗಲಿದೆ. ಮಹದಾಯಿ ವಿಚಾರದಲ್ಲಿ ತೀರ್ಪು ಕೊಡಲು ಅಮಿತ್ ಶಾ ಯಾರು? ಯಡಿಯೂರಪ್ಪ ಯಾರು ಎಂದು ಪ್ರಶ್ನಿಸಿದರು. ವಿವಾದಕ್ಕೆ ಸಂಬಂಧಪಟ್ಟಂತೆ ಸತ್ಯ ಸಂಗತಿಗಳ ಬಗ್ಗೆ ನೀರಾವರಿ ಮತ್ತು ಕಾನೂನು ತಜ್ಞರು ಬೆಳಕು ಚೆಲ್ಲಬೇಕು. ಉತ್ತರ ಕರ್ನಾಟಕದ ಜನರ ಸಮಸ್ಯೆಗಳ ಚರ್ಚೆಗೂ ಇದು ವೇದಿಕೆಯಾಗಲಿದೆ. ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯಕ್ಕೆ ಬಿದ್ದ ಪೆಟ್ಟು ಈವರೆಗೂ ಸರಿಪಡಿಸಿ ಕೊಳ್ಳಲು ಆಗುತ್ತಿಲ್ಲ. ಮಹದಾಯಿ ವಿಷಯವನ್ನು ಈ ರೀತಿಯಾಗದಂತೆ ಎಚ್ಚರ ವಹಿಸಬೇಕು. ರಾಷ್ಟ್ರೀಯ ಪಕ್ಷಗಳು ಉತ್ತರ ಕರ್ನಾಟಕದ ಜನರ ಭಾವನೆಯನ್ನು ದುರುಪಯೋಗ ಪಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದು,ನಗೆಪಾಟಲಿಗೀಡುಮಾಡಲಾಗುತ್ತಿದೆ ಎಂದರು.