ನಿರೀಕ್ಷೆಗಳುಎಲ್ಲರಿಗೂ 24X7 ವಿದ್ಯುತ್ ಪೂರೈಸುವ ‘ಸೌಭಾಗ್ಯ’ ಯೋಜನೆಸಬ್ಸಿಡಿ ದರದಲ್ಲಿ ಟ್ರಾನ್ಸ್‌ಫಾರ್ಮರ್, ಮೀಟರ್, ವೈರ್ ವಿತರಣೆಉದ್ಯೋಗ ಸೃಷ್ಟಿಗೆ ಅನುವಾಗುವ ವಿಶೇಷ ಕಾರ್ಯಕ್ರಮಎಲ್ಲರಿಗೂ ಸೂರು ಯೋಜನೆಗೆ ಮತ್ತಷ್ಟು ಅನುದಾನ3 ವರ್ಷದ ಕನಿಷ್ಠಕ್ಕಿಳಿದಿರುವ ಜಿಡಿಪಿ ಮೇಲೆತ್ತಲು ಹಲವು ಕ್ರಮ

ನವದೆಹಲಿ: ಭಾರತದ ಆರ್ಥಿಕತೆ ಕುಸಿಯುತ್ತಿದೆ ಎಂಬ ಟೀಕೆ-ಟಿಪ್ಪಣಿಗಳ ನಡುವೆಯೇ, ಆರ್ಥಿಕತೆ ಮೇಲೆತ್ತುವ ಹತ್ತಾರು ಮಹತ್ತರ ಕ್ರಮಗಳು ಹಾಗೂ ಮಹತ್ವಾಕಾಂಕ್ಷಿ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಘೋಷಿಸುವ ಸಾಧ್ಯತೆ ಇದೆ.

ಭಾನುವಾರದಿಂದ 2 ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಆರಂಭವಾಗಲಿದ್ದು, ಇದೇ ವೇಳೆ ಸಂಘ ಪರಿವಾರದ ಕಣ್ಮಣಿ ದೀನದಯಾಳ ಉಪಾಧ್ಯಾಯರ ಜನ್ಮ ಶತಮಾನೋತ್ಸವ ಆಚರಣೆಯೂ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಸೋಮವಾರ ನಡೆಯಲಿರುವ ಕಾರ್ಯಕಾರಿಣಿಯ ಸಮಾರೋಪ ವೇಳೆ 40 ಸಾವಿರ ಕೋಟಿಯಿಂದ 50 ಸಾವಿರ ಕೋಟಿ ರು.ವರೆಗಿನ ಬೃಹತ್ ಪ್ಯಾಕೇಜನ್ನು ಮೋದಿ ಘೋಷಿಸುವ ಸಾಧ್ಯತೆ ಇದೆ.

ಜಿಡಿಪಿ ವೃದ್ಧಿ, ವಿದ್ಯುತ್ ವಲಯ, ಗೃಹ ನಿರ್ಮಾಣ ಮತ್ತು ಉದ್ಯೋಗ ಸೃಷ್ಟಿಯಂಥ ಸಮಾಜ ಕಲ್ಯಾಣ ವಲಯಗಳಿಗೆ ಸಂಬಂಧಿಸಿದ ಪ್ಯಾಕೇಜ್ ಇದಾಗಲಿದೆ ಎಂದು ಹೇಳಲಾಗಿದೆ.

ಎಲ್ಲ ಮನೆಗಳಿಗೂ 24 ತಾಸು ವಿದ್ಯುತ್: ಈ ನಡುವೆ, ದೇಶದ ಎಲ್ಲ ಮನೆಗಳಿಗೂ 24 ತಾಸು, ವಾರದ ಏಳೂ ದಿನ ನಿರಂತರ ವಿದ್ಯುತ್ ಪೂರೈಸುವ ಸಲುವಾಗಿ ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ರೂಪಿಸಿದ್ದು, ಕಾರ್ಯಕಾರಿಣಿ ಸಮಾರೋಪ ಭಾಷಣದಲ್ಲಿ ನರೇಂದ್ರ ಮೋದಿ ಅವರು ಘೋಷಣೆ ಮಾಡಲಿದ್ದಾರೆ ಎಂದು ಇಂಧನ ಸಚಿವ ಆರ್.ಕೆ. ಸಿಂಗ್ ಸಮಾರಂಭವೊಂದರಲ್ಲಿ ಶನಿವಾರ ಖಚಿತಪಡಿಸಿದರು. ಆದರೆ ಹೆಚ್ಚಿನ ಮಾಹಿತಿಯನ್ನು ಅವರು ನೀಡಲಿಲ್ಲ.

ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ, ಸರ್ವರಿಗೂ 24X7 ವಿದ್ಯುತ್ ಪೂರೈಸುವ ಈ ಯೋಜನೆಗೆ ‘ಸೌಭಾಗ್ಯ’ ಎಂದು ಹೆಸರಿಡಲಾಗುತ್ತದೆ. ಇದರಡಿ ಟ್ರಾನ್ಸ್‌ಫಾರ್ಮರ್, ಮೀಟರ್, ವೈರ್ ಮೇಲೆ ಸಬ್ಸಿಡಿ ನೀಡಲಾಗುತ್ತದೆ.

ಎಲ್ಲ ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಆನಂತರ ನಿರಂತರ ವಿದ್ಯುತ್ ಸರ್ವರಿಗೂ ಪೂರೈಕೆ ಆಗಲಿದೆ. ಕಳೆದ ವಾರ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಗೆ ನಿಗದಿಯಾಗಿತ್ತು ಎಂದು ಹೇಳಲಾಗಿದೆ.

ಸರ್ಕಾರದ ಮುಂದೆ ಈಗ ಹಣದುಬ್ಬರ ತಗ್ಗಿಸುವಿಕೆ, ಕುಸಿಯುತ್ತಿರುವ ಜಿಡಿಪಿ ದರ ಮೇಲೆತ್ತುವಿಕೆ ಹಾಗೂ ಉದ್ಯೋಗ ಸೃಷ್ಟಿಯೆಂಬ 3 ಬೃಹತ್ ಸವಾಲುಗಳು ಇವೆ. ಈ ಬಗ್ಗೆ ಪ್ರಸ್ತಾಪಿಸಿದ್ದ ವಿತ್ತ ಸಚಿವ ಅರುಣ್ ಜೇಟ್ಲಿ, ‘ಆರ್ಥಿಕತೆ ಮೇಲೆತ್ತಲು ಸರ್ಕಾರ ದೊಡ್ಡ ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ’ ಎಂದು ಕಳೆದ ವಾರ ಸುಳಿವು ನೀಡಿದ್ದರು.

ದೂರದರ್ಶನದಲ್ಲಿ ನೇರಪ್ರಸಾರ: ಸಾಮಾನ್ಯವಾಗಿ ಪಕ್ಷದ ಸಭೆಗಳಲ್ಲಿನ ಭಾಷಣಗಳಿಗೆ ಟೀವಿ ವಾಹಿನಿಗಳು ಮತ್ತು ಪತ್ರಕರ್ತರಿಗೆ ಪ್ರವೇಶಾವಕಾಶವಿರುವುದಿಲ್ಲ. ಆದರೆ, ಮಹತ್ವಾಕಾಂಕ್ಷಿ ಯೋಜನೆಗಳ ಘೋಷಣೆಯ ಸಮಾರಂಭ ಇದಾಗಿರುವ ಕಾರಣ ಪ್ರಧಾನಿಯವರ ಭಾಷಣವನ್ನು ಸರ್ಕಾರಿ ಟೀವಿ ವಾಹಿನಿಯಾದ ದೂರದರ್ಶನದಲ್ಲಿ ಅಂದು ನೇರಪ್ರಸಾರ ಮಾಡಲು ಸೂಚಿಸಲಾಗಿದೆ. ಖಾಸಗಿ ವಾಹಿನಿಗಳಿಗೂ ಕೂಡ ನೇರಪ್ರಸಾರದ ಫೀಡ್ ನೀಡಲು ನಿರ್ಧರಿಸಲಾಗಿದೆ.