ಬೆಂಗಳೂರು (ಡಿ. 27:  ಪಂಚರಾಜ್ಯ ಚುನಾವಣೆಯಲ್ಲಿ ಪರಾಭವವಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ತಗ್ಗಿಬಗ್ಗಿ ನಡೆಯಲು ಕಲಿತಿದ್ದಾರೆ ಎಂಬ ಅರ್ಥದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನರೇಂದ್ರ ಮೋದಿ ವೀಕ್ಷರೆದುರು 3ಬಾರಿ ತಲೆಬಾಗಿ ನಮಸ್ಕರಿಸುವ ವಿಡಿಯೋವನ್ನು ಪೋಸ್ಟ್‌ ಮಾಡಿ, ‘3 ರಾಜ್ಯಗಳ ಚುನಾವಣೆಯನ್ನು ಸೋತ ಬಳಿಕ ಮೋದಿ ಹೀಗಾಗಿದ್ದಾರೆ. ಲೋಕಸಭಾ ಚುನಾವಣೆ ಮುಗಿದ ಬಳಿಕ ಇನ್ನೇನಾಗಬಹುದು?’ ಎಂದು ಒಕ್ಕಣೆ ಬರೆದು ಪೋಸ್ಟ್‌ ಮಾಡಲಾಗಿದೆ. ಹರಿಯಾಣ ಎಐಸಿಸಿ ಸದಸ್ಯ ಚಿರಂಜೀವ್‌ ರಾವ್‌ ಮೊದಲಿಗೆ ಈ ವಿಡಿಯೋವನ್ನು ಟ್ವೀಟ್‌ ಮಾಡಿದ್ದರು. 13 ಸೆಕೆಂಟ್‌ಗಳಿರುವ ವಿಡಿಯೋವು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಸದ್ಯ ಅದು 10,000ಕ್ಕೂ ಹೆಚ್ಚು ಬಾರಿ ಶೇರ್‌ ಆಗಿದ್ದು, 3 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. ಆದರೆ ನಿಜಕ್ಕೂ ಈ ವಿಡಿಯೋ ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಯ ನಂತರದ್ದೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ, ಈ ವಿಡಿಯೋ 2016ರದ್ದು ಎಂಬುದು ಪತ್ತೆಯಾಗಿದೆ. ರಿವರ್ಸ್‌ ಇಮೇಜ್‌ನಲ್ಲಿ ಆಲ್ಟ್‌ ನ್ಯೂಸ್‌ ಈ ಬಗ್ಗೆ ಹುಡುಕಾಟ ನಡೆಸಿದ್ದು, ನರೇಂದ್ರ ಮೋದಿ ಅವರು ನೋಟು ಅಮಾನೀಕರಣಗೊಳಿಸಿದ ಬಳಿಕ ಗೋವಾದಲ್ಲಿ ಜನರೊಂದಿಗೆ ಭಾವನಾತ್ಮಕವಾಗಿ ಮಾತನಾಡಿದ್ದ ಸಂದರ್ಭದ ವಿಡಿಯೋ ಎಂಬುದು ಪತ್ತೆಯಾಗಿದೆ. ಅದನ್ನು ಹಲವಾರು ಸುದ್ದಿಮಾಧ್ಯಮಗಳೂ ವರದಿ ಮಾಡಿದ್ದವು. ಯುಟ್ಯೂಬ್‌ನಲ್ಲಿ ನರೇಂದ್ರ ಮೋದಿ ಮಾತುಕತೆಯ ಪೂರ್ಣ ವಿಡಿಯೋ ಇದೆ. ಸದ್ಯ ಅದೇ ವಿಡಿಯೋದಲ್ಲಿ ಮೋದಿ ಬಾಗುವುದನ್ನು ಮಾತ್ರ ಕತ್ತರಿಸಿ ಬೇರೊಂದು ಅರ್ಥದಲ್ಲಿ ಸೋಷಿಯಲ್‌ ಮಿಡಿಯಾದಲ್ಲಿ ಹರಡಲಾಗಿದೆ.

- ವೈರಲ್ ಚೆಕ್