ನವದೆಹಲಿ (ನ. 03): ಭಾರತದ ಗಡಿಯಲ್ಲಿ ಸ್ಮಾರ್ಟ್ ಬೇಲಿ ನಿರ್ಮಿಸಲಾಗಿದೆ ಎಂಬ ಸಂದೇಶದೊಂದಿಗಿನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ.

ಅದರೊಂದಿಗೆ, ‘ಮೋದಿ ಜಿ.. ನೀವು ದೇಶದ ಪ್ರಜೆಗಳು ಹೆಮ್ಮೆಪಡುವ ಕೆಲಸ ಮಾಡಿದ್ದೀರಿ. ಇವತ್ತು ಇಸ್ರೇಲ್‌ನಂತೆಯೇ ನಮ್ಮ ದೇಶದ ಗಡಿಯಲ್ಲೂ ಸ್ಮಾರ್ಟ್ ಬೇಲಿ ತಲೆ ಎತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಳಿಕ ಆತಂಕಗೊಂಡಿದ್ದೆವು. ಆದರೆ ಆ ದುಡ್ಡು ನಮ್ಮ ದೇಶದ ರಕ್ಷಣೆಗೆ ಬಳಕೆಯಾಗಿದೆ ಎಂಬುದು ಈಗ ಮನವರಿಕೆಯಾಗುತ್ತಿದೆ’ ಎಂದು ಒಕ್ಕಣೆಯನ್ನು ಬರೆಯಲಾಗಿದೆ.

ಈ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಆದರೆ ನಿಜಕ್ಕೂ ಭಾರತದ ಗಡಿಯಲ್ಲಿ ಸ್ಮಾರ್ಟ್ ಬೇಲಿ ನಿರ್ಮಾಣವಾಗಿದೆಯೇ ಎಂದು ಹುಡುಕ ಹೊರಟಾಗ, ಈ ಫೋಟೋದ ಅಸಲಿಯತ್ತು ಬಯಲಾಗಿದೆ. ವಾಸ್ತವವಾಗಿ ಭಾರತದ ಗಡಿಯಲ್ಲಿ ನುಸುಳುಕೋರರು ಅಕ್ರಮವಾಗಿ ದೇಶದೊಳಕ್ಕೆ ಪ್ರವೇಶಿಸದಂತೆ ತಡೆಯುವ ಸ್ಮಾರ್ಟ್ ಬೇಲಿ ಈವರೆಗೆ ನಿರ್ಮಾಣವಾಗಿಲ್ಲ. ಆದರೆ 16 ಸೆಪ್ಟೆಂಬರ್ 2018 ರಂದು ಕೇಂದ್ರ ಗೃಹ ಸಚಿವ ರಾಜ್‌ನಾಥ್
ಸಿಂಗ್ ಭಾರತದ ಗಡಿಯಲ್ಲಿ ಸ್ಮಾರ್ಟ್ ಬೇಲಿ ನಿರ್ಮಿಸುವ ಬಗ್ಗೆ ಘೋಷಿಸಿದ್ದರು. ಅವರ ಹೇಳಿಕೆಯ ಬಳಿಕ ಜಾಲತಾಣಗಳಲ್ಲಿ ಸ್ಮಾರ್ಟ್ ಬೇಲಿಯ ಚಿತ್ರಗಳು ಹರಿದಾಡಿದ್ದವು.

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೋಗಳು 2012 ಕ್ಕೂ ಮುಂಚಿನ ಈಜಿಪ್ಟ್ ಮತ್ತು ಕೆನಡಾ ಗಡಿಯ ಫೋಟೋಗಳು. ಆ ಫೋಟೋವನ್ನೇ ಬಳಸಿಕೊಂಡು ಕೇಂದ್ರ ಸರ್ಕಾರ ಪೆಟ್ರೋಲ್ ದರ ಏರಿಕೆ ಮಾಡಿ,ದೇಶದ ರಕ್ಷಣೆಗೆ ಬಳಸಿದೆ ಎಂಬರ್ಥದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹರಡಲಾಗಿದೆ. 

-ವೈರಲ್ ಚೆಕ್