ಬೆಂಗಳೂರು (ಆ.27): ಸಂಸ್ಕೃತದ ಮಹತ್ವ ಬಗ್ಗೆ ಮೋದಿಗೆ ಸಂಸ್ಕೃತದಲ್ಲಿಯೇ ಪ್ರಶ್ನಿಸಿದ ಬೆಂಗಳೂರಿನ 10ನೇ ತರಗತಿ ಬಾಲಕಿಗೆ ಮೋದಿ ಸಂಸ್ಕೃತದಲ್ಲಿಯೇ ಉತ್ತರಿಸಿದ್ದಾರೆ.

ವೈದಿಕ ಭಾಷಾ ಮಹತ್ವದ ಬಗ್ಗೆ ಮೋದಿ ಅವರನ್ನು ಚಿನ್ಮಯಿ ಎಂಬ ವಾಯ್ಸ್ ಮೆಸೇಜ್ ಮೂಲಕ ಪ್ರಶ್ನೆ ಕೇಳಿದ್ದಳು. ಪ್ರಧಾನಿ ಅವರ ಆಕಾಶವಾಣಿ ಕಾರ್ಯಕ್ರಮ ಮನ್ ಕೀ ಬಾತ್‌ನಲ್ಲಿ ಈ ಪ್ರಶ್ನೆಗೆ ಉತ್ತರಿಸಿದ ಮೋದಿ, 'ಸಂಸ್ಕೃತದಲ್ಲಿ ಪ್ರಶ್ನೆ ಕೇಳಿದ್ದು ಅದ್ಭುತ,' ಎಂದು ಸಂಸ್ಕೃತದಲ್ಲಿಯೇ ಉತ್ತರ ಆರಂಭಿಸಿ, ಈ ದೈವೀ ಭಾಷೆಯ ಮಹತ್ವವನ್ನು ಹೇಳಿದರು. 

ಯಾರೀ ಚಿನ್ಮಯಿ?
ಶೃಂಗೇರಿ ಮೂಲದ ಲಕ್ಷ್ಮಿನಾರಾಯಣ ಭುವನಕೋಟಿ ಹಾಗೂ ಶ್ರೀವಿದ್ಯಾ ದಂಪತಿ ಪುತ್ರಿ ಈ ಚಿನ್ಮಯಿ. ಗಿರಿನಗರದ ಭಾರತಿ ಶಾಲಾ ವಿದ್ಯಾರ್ಥಿನಿ. ಇವರ ಮನೆಯಲ್ಲಿ ಪೋಷಕರು ಹಾಗೂ ಸಹೋದರ ಚಿದ್ಗಣಪತಿ ಸೇರಿ ಎಲ್ಲರೂ ಸಂಸ್ಕೃತದಲ್ಲಿಯೇ ಮಾತನಾಡುತ್ತಾರೆ. ತಂದೆ ಸಂಸ್ಕೃತ ವಿದ್ವಾಂಸರಾಗಿದ್ದು, ಭಾಷೆಯನ್ನು ಅಭಿವೃದ್ಧಿಪಡಿಸುತ್ತಿರುವ ಸಂಸ್ಕೃತ ಭಾರತಿಯೊಂದಿಗೆ ಕಳೆದ 30 ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿದ್ದಾರೆ.

ಮತ್ತೂರನ್ನು ಪ್ರಶಂಸಿದ ಮೋದಿ:
ರಕ್ಷಾ ಬಂಧನ ದಿನವಾದ ಶ್ರಾವಣ ಪೂರ್ಣಿಮೆಯನ್ನು ‘ಸಂಸ್ಕೃತ ದಿನ’ ಎಂದೂ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ‘ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಮತ್ತೂರಿನ ಜನರು ಈಗಲೂ ಸಂಸ್ಕೃತವನ್ನು ತಮ್ಮ ದೈನಂದಿನ ವ್ಯಾವಹಾರಿಕ ಭಾಷೆಯನ್ನಾಗಿ ಬಳಸುತ್ತಾರೆ’ ಎಂದು ಕಾರ್ಯಕ್ರಮದಲ್ಲಿ ಪ್ರಶಂಸಿಸಿದ್ದಾರೆ. 

ಈ ಮೂಲಕ ಈ ಪುರಾತನ ಭಾಷೆಯನ್ನು ರಕ್ಷಿಸುವಲ್ಲಿ ಮತ್ತೂರಿನ ಪಾತ್ರ ಹಿರಿದು ಎಂದು ಮೋದಿ ಕೊಂಡಾಡಿದ್ದಾರೆ. ಭಾನುವಾರ ತಮ್ಮ ಮಾಸಿಕ ಮಾಸಿಕ ‘ಮನ್ ಕೀ ಬಾತ್’ ರೇಡಿಯೋ ಭಾಷಣದಲ್ಲಿ ಮಾತನಾಡಿದ ಮೋದಿ ಅವರು, ‘ರಕ್ಷಾ ಬಂಧನ ದಿನವನ್ನು ಸಂಸ್ಕೃತ ದಿನ ಎಂದೂ ಆಚರಿಸಲಾಗುತ್ತದೆ. ಈ ಪುರಾತನ ಭಾಷೆಯನ್ನು ಉಳಿಸಿ, ಬೆಳೆಸುವಲ್ಲಿ ಹಾಗೂ ಈ ಪುರಾತನ ಪರಂಪರೆಯನ್ನು ರಕ್ಷಿಸಿ ಇನ್ನೂ ಜನಮಾನಸದಲ್ಲಿ ಪಸರಿಸಲು ಶ್ರಮಿಸುತ್ತಿ ರುವ ಎಲ್ಲರಿಗೂ ಅಭಿನಂದನೆಗಳು’ ಎಂದರು.

‘ಸಂಸ್ಕೃತ ಭಾಷೆ ಹಾಗೂ ಸಾಹಿತ್ಯದಲ್ಲಿ ಜೀವನದ ಪ್ರತಿ ಅಂಶಗಳೂ ಅಡಕವಾಗಿವೆ. ವಿಜ್ಞಾನ-ತಂತ್ರಜ್ಞಾನ, ಕೃಷಿ, ಆರೋಗ್ಯ, ಗಣಿತ, 
ನಿರ್ವಹಣೆ, ಆರ್ಥಿಕತೆ, ಪರಿಸರ- ಹೀಗೆ ಪ್ರತಿ ವಿಭಾಗವನ್ನೂ ಸಂಸ್ಕೃತದಲ್ಲಿನ ಕೃತಿಗಳು ಮುಟ್ಟಿವೆ. ವೇದಗಳಲ್ಲಿ ಹಲವು ಮಂತ್ರಗಳಿದ್ದು, ಅವು ಈಗ ಜಗತ್ತು ಎದುರಿಸುತ್ತಿರುವ ತಾಪಮಾನ ಏರಿಕೆ ಯನ್ನು ನಿಯಂತ್ರಿ ಸುವ ಉಪಾಯವನ್ನು ನೀಡುತ್ತವೆ’ ಎಂದು ಕೊಂಡಾಡಿದರು.