ಕೊಲ್ಲಮ್(ಜ.15): ಶಬರಿಮಲೆ ವಿವಾದದಿಂದಾಗಿ ಕುದಿಯುತ್ತಿರುವ ಕೇರಳಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ. 

ಇಲ್ಲಿನ ರಾಷ್ಟ್ರೀಯ ಹೆದ್ದಾರಿ ನಂ.66ರಲ್ಲಿ ಕೊಲ್ಲಮ್ ಬೈಪಾಸ್ ರಸ್ತೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಒಡಿಶಾದಿಂದ ವಿಮಾನದ ಮೂಲಕ ನೇರವಾಗಿ ಕೊಲ್ಲಮ್ ಗೆ ತಲುಪಿದ ಮೋದಿ ಅವರನ್ನು ಸಿಎಂ ಪಿಣರಾಯಿ ವಿಜಯನ್, ರಾಜ್ಯಪಾಲ ಪಳನಿಸ್ವಾಮಿ ಸದಾಶಿವಂ  ಸೇರಿದಂತೆ ಪ್ರಮುಖ ಗಣ್ಯರು ಬರಮಾಡಿಕೊಂಡರು.

ಬಳಿಕ ಕೊಲ್ಲಮ್ ಬೈಪಾಸ್ ರಸ್ತೆ ಉದ್ಘಾಟಿಸಿದ ಪ್ರಧಾನಿ ಮೋದಿ, ಅಭಿವೃದ್ಧಿ ಯೋಜನೆಗಳ ವಿಳಂಬ ನೀತಿಯನ್ನು ತಮ್ಮ ಸರ್ಕಾರ ಕೊನೆಗಾಣಿಸಿದ್ದು, ತ್ವರಿತಗತಿಯ ಅಭಿವೃದ್ಧಿ ಕಾಮಗಾರಿಗೆ ಒತ್ತು ನೀಡುತ್ತದೆ ಎಂದು ಹೇಳಿದರು.

ಕೇರಳದ ಜನತೆ ಭಕ್ತಿ ಮತ್ತು ಶಕ್ತಿಯ ಸಹಾಯದಿಂದ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸುತ್ತಿದ್ದಾರೆ ಎಂದು ಈ ವೇಳೆ ಪ್ರಧಾನಿ ಮೋದಿ ನುಡಿದರು.