ಮೋದಿ ಸರ್ಕಾರದಿಂದ ಭರ್ಜರಿ ಹಬ್ಬದ ಗಿಫ್ಟ್‌

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Sep 2018, 8:26 AM IST
PM Modi Govt Gift For Asha And Anganwadi Workers
Highlights

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭರ್ಜರಿ ಹಬ್ಬದ ಗಿಫ್ಟ್ ಘೋಷಣೆ ಮಾಡಿದೆ.  ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಂಪರ್‌ ಕೊಡುಗೆಗಳನ್ನು ಪ್ರಕಟಿಸಿದ್ದಾರೆ.

ನವದೆಹಲಿ: ಸಾರ್ವತ್ರಿಕ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಂಪರ್‌ ಕೊಡುಗೆಗಳನ್ನು ಪ್ರಕಟಿಸಿದ್ದಾರೆ. ಬರುವ ಅಕ್ಟೋಬರ್‌ನಿಂದ ಅನ್ವಯವಾಗುವಂತೆ ಈ ನೌಕರರ ಗೌರವಧನ ಹೆಚ್ಚಿಸುವುದರ ಜತೆಗೆ, ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಹಾಗೂ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯನ್ನು ಉಚಿತವಾಗಿ ಒದಗಿಸುವುದಾಗಿ ಘೋಷಿಸಿದ್ದಾರೆ.

ದೇಶದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಜತೆ ಮಂಗಳವಾರ ವಿಡಿಯೋ ಕಾನ್ಫರೆನ್ಸಿಂಗ್‌ನಲ್ಲಿ ಸಂವಾದ ನಡೆಸಿದ ವೇಳೆ ಮೋದಿ ಅವರು ಈ ಶುಭ ಸುದ್ದಿಗಳನ್ನು ನೀಡಿದ್ದಾರೆ. ಅಕ್ಟೋಬರ್‌ನಿಂದ ಪರಿಷ್ಕೃತ ಗೌರವಧನ ಜಾರಿಗೆ ಬರಲಿದ್ದು, ನವೆಂಬರ್‌ ಸಂಬಳದಿಂದ ಕೈಗೆ ಸಿಗಲಿದೆ. ಇದು ಆ ಸಿಬ್ಬಂದಿಗೆ ದೀಪಾವಳಿ ಉಡುಗೊರೆ ಎಂದು ಮೋದಿ ಅವರು ಹೇಳಿದರು.

ಸದ್ಯ 3 ಸಾವಿರ ರು. ಗೌರವ ಧನ ಪಡೆಯುತ್ತಿರುವವರಿಗೆ ಇನ್ನು ಮುಂದೆ 4500 ರು. ಲಭ್ಯವಾಗಲಿದೆ. 2200 ರು. ಸ್ವೀಕರಿಸುತ್ತಿರುವವರಿಗೆ 3500 ರು. ಸಿಗಲಿದೆ. ಅಂಗನವಾಡಿ ಸಹಾಯಕಿಯರ ಗೌರವ ಧನ 1500 ರು.ನಿಂದ 2500 ರು.ಗೆ ಏರಿಕೆಯಾಗಲಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಜತೆ ರಾಜ್ಯಗಳೂ ಗೌರವಧನ ಸೇರಿಸಿ ನೀಡುತ್ತವೆ. ಸದ್ಯ ಕರ್ನಾಟಕದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಒಟ್ಟಾರೆ ಮಾಸಿಕ 8 ಸಾವಿರ ಹಾಗೂ ಸಹಾಯಕಿಯರಿಗೆ ಮಾಸಿಕ 4000 ರು. ವೇತನ ಸಿಗುತ್ತಿದೆ. ಅಕ್ಟೋಬರ್‌ನಿಂದ ಅವರ ಗೌರವ ಧನ ಕ್ರಮವಾಗಿ 9500 ರು. ಹಾಗೂ 5000 ರು.ಗೆ ಹೆಚ್ಚಳವಾಗಲಿದೆ. ಕರ್ನಾಟಕ ಸರ್ಕಾರವೂ ಗೌರವಧನ ಹೆಚ್ಚಿಸಿದರೆ ಇದು ಇನ್ನಷ್ಟುಏರಿಕೆಯಾಗಲಿದೆ.

ಐಸಿಡಿಎಸ್‌-ಸಿಎಎಸ್‌ ತಂತ್ರಂಶಾ ಬಳಕೆ ವಿಧಾನ ಕಲಿತುಕೊಳ್ಳುವ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ 250 ರು.ನಿಂದ 500 ರು.ವರೆಗೂ ಪ್ರೋತ್ಸಾಹಧನ ನೀಡಲಾಗುವುದು ಎಂದು ಮೋದಿ ತಿಳಿಸಿದರು.

ಇದಲ್ಲದೆ ಕೇಂದ್ರ ಸರ್ಕಾರದ ಸಾಮಾಜಿಕ ಸುರಕ್ಷಾ ಯೋಜನೆಗಳಡಿಯಲ್ಲಿ 4 ಲಕ್ಷ ರು.ವರೆಗೂ ವಿಮಾ ರಕ್ಷಣೆ ಸಿಗಲಿದೆ. ಜೀವನಜ್ಯೋತಿ ಬಿಮಾ ಯೋಜನೆ, ಸುರಕ್ಷಾ ಬಿಮಾ ಯೋಜನೆಗೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು ನಯಾಪೈಸೆ ಪಾವತಿಸಬೇಕಾಗಿಲ್ಲ ಎಂದು ತಿಳಿಸಿದರು.

loader