ನೇಪಾಳ ರಾಜಧಾನಿ ಕಾಠ್ಮಂಡುವಿನಲ್ಲಿ ನಾಲ್ಕನೇ ‘ಬಿಮ್‌ಸ್ಟೆಕ್‌’ ಶೃಂಗ ಸಭೆ ನಡೆದಿದ್ದು, ಪ್ರಧಾನಿ ಮೋದಿ ಪಾಲ್ಗೊಂಡಿದ್ದಾರೆ. ಮಾದಕ ದ್ರವ್ಯಗಳ ಸಾಗಣೆ ತಡೆಗೆ ಸೂಕ್ತ ಕ್ರಮ ಕೈಗೊಳ್ಳುವ ಉದ್ದೇಶದಿಂದ ಈ ನೆರೆ ರಾಷ್ಟ್ರಗಳೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಲು ಸಿದ್ಧವೆಂದು ಹೇಳಿದ್ದಾರೆ.

ಕಾಠ್ಮಂಡು: ಪ್ರಾದೇಶಿಕ ಸಂಪರ್ಕ ವೃದ್ಧಿಸಲು ಹಾಗೂ ಭಯೋತ್ಪಾದನೆ, ಮಾದಕ ವಸ್ತುಗಳ ಸಾಗಣೆಯಂತಹ ದಂಧೆಗಳನ್ನು ಮಟ್ಟಹಾಕಲು ಸಪ್ತರಾಷ್ಟ್ರಗಳ ಕೂಟವಾದ ‘ಬಿಮ್‌ಸ್ಟೆಕ್‌’ ಜತೆ ಕಾರ್ಯನಿರ್ವಹಿಸಲು ಬದ್ಧವಿರುವುದಾಗಿ ಭಾರತ ಘೋಷಿಸಿದೆ.

ನೇಪಾಳ ರಾಜಧಾನಿ ಕಾಠ್ಮಂಡುವಿನಲ್ಲಿ ನಡೆಯುತ್ತಿರುವ ನಾಲ್ಕನೇ ‘ಬಿಮ್‌ಸ್ಟೆಕ್‌’ ಶೃಂಗದ ಉದ್ಘಾಟನಾ ಸಮಾರಂಭದಲ್ಲಿ ಗುರುವಾರ ಮಾತನಾಡಿದ ಪ್ರಧಾನ ನರೇಂದ್ರ ಮೋದಿ ಅವರು ವಿಷಯ ತಿಳಿಸಿದರು. ಮಾನವೀಯ ನೆರವು ಹಾಗೂ ವಿಕೋಪ ಪರಿಹಾರ ಕಾರ್ಯಾಚರಣೆಗಳಲ್ಲಿ ‘ಬಿಮ್‌ಸ್ಟೆಕ್‌’ ಸದಸ್ಯ ರಾಷ್ಟ್ರಗಳ ನಡುವೆ ಸಹಕಾರ ಹಾಗೂ ಸಮನ್ವಯ ಇರಬೇಕು ಎಂದು ಹೇಳಿದರು.

ಭಯೋತ್ಪಾದನೆ ಹಾಗೂ ಉಗ್ರವಾದ ಜಾಲದ ಜತೆ ನಂಟು ಹೊಂದಿದ ಮಾದಕ ವಸ್ತು ಕಳ್ಳಸಾಗಣೆಯಂತಹ ಅಂತರ ರಾಷ್ಟ್ರೀಯ ಅಪರಾಧಗಳಿಂದ ತೊಂದರೆ ಅನುಭವಿಸದ ದೇಶವೇ ಈ ಭಾಗದಲ್ಲಿ ಇಲ್ಲ. ಮಾದಕ ವಸ್ತು ಕಳ್ಳ ಸಾಗಣೆ ವಿಚಾರವಾಗಿ ‘ಬಿಮ್‌ಸ್ಟೆಕ್‌’ ಅಡಿ ಸಮ್ಮೇಳನ ಆಯೋಜಿಸಲು ಭಾರತ ಸಿದ್ಧವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಸಾರ್ಕ್‌ಗೆ ಗುಡ್‌ ಬೈ, ಏನಿದು ಬಿಮ್‌ಸ್ಟೆಕ್

ಎರಡು ದಿನಗಳ ‘ಬಿಮ್‌ಸ್ಟೆಕ್‌’ ಶೃಂಗದಲ್ಲಿ ಪಾಲ್ಗೊಳ್ಳುವ ಸಲುವಾಗಿ ಮೋದಿ ಅವರು ಗುರುವಾರ ಬೆಳಗ್ಗೆ ಕಾಠ್ಮಂಡುವಿಗೆ ಬಂದಿಳಿದರು. ಇದೇ ವೇಳೆ, ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಹಾಗೂ ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ ಅವರ ಜತೆಗೆ ಮಾತುಕತೆ ನಡೆಸಿದರು.

‘ಬಿಮ್‌ಸ್ಟೆಕ್‌’ ಎಂಬುದು ಬಾಂಗ್ಲಾದೇಶ, ಭಾರತ, ಮ್ಯಾನ್ಮಾರ್‌, ಶ್ರೀಲಂಕಾ, ಥಾಯ್ಲೆಂಡ್‌, ಭೂತಾನ್‌ ಹಾಗೂ ನೇಪಾಳ ದೇಶಗಳ ಒಕ್ಕೂಟವಾಗಿದೆ. ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ ಶೇ.22ರಷ್ಟುಜನರು ಈ ದೇಶಗಳಲ್ಲಿ ವಾಸಿಸುತ್ತಿದ್ದಾರೆ.