ನವದೆಹಲಿ[ಮೇ.29]: ಮೇ 30 ರಂದು ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಯಾರಾರ‍ಯರಿಗೆ ಸಚಿವ ಸ್ಥಾನ ನೀಡಬೇಕು ಎಂಬುದ ಕುರಿತು ಮಂಗಳವಾರ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮತ್ತು ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಏನೇನಾಯ್ತು ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲವಾದರೂ, ಯಾವ ಪಕ್ಷಗಳಿಗೆ ಎಷ್ಟುಸಚಿವ ಸ್ಥಾನ ನೀಡಬೇಕು, ಯಾರಾರ‍ಯರಿಗೆಲ್ಲಿ ಸಂಪುಟದಲ್ಲಿ ಅವಕಾಶ ಕಲ್ಪಿಸಬೇಕು ಎಂಬ ಬಗ್ಗೆ ಉಭಯ ನಾಯಕರು ಚರ್ಚಿಸಿದ್ದಾರೆ ಎನ್ನಲಾಗಿದೆ.

ಹಿರಿಯರಿಗೆ ಮತ್ತೆ ಮಣೆ

ಕಳೆದ ಸರ್ಕಾರದಲ್ಲಿ ಸಚಿವರಾಗಿದ್ದ ರಾಜ್‌ನಾಥ್‌, ಗಡ್ಕರಿ, ನಿರ್ಮಲಾ ಸೀತಾರಾಮನ್‌, ರವಿಶಂಕರ್‌ ಪ್ರಸಾದ್‌, ಪಿಯೂಷ್‌ ಗೋಯಲ್‌, ನರೇಂದ್ರಸಿಂಗ್‌ ತೋಮರ್‌, ಪ್ರಕಾಶ್‌ ಜಾವಡೇಕರ್‌ ಸೇರಿದಂತೆ ಹಲವು ಹಿರಿಯ ನಾಯಕರಿಗೆ ಮತ್ತೆ ಸಚಿವ ಸ್ಥಾನ ಕಲ್ಪಿಸುವುದು ಬಹುತೇಕ ಖಚಿತವಾಗಿದೆ.

ಜೇಟ್ಲಿಗಿಲ್ಲ ಹುದ್ದೆ

ಅನಾರೋಗ್ಯದಿಂದ ಬಳಲುತ್ತಿರುವ ಅರುಣ್‌ ಜೇಟ್ಲಿ, ಸ್ವತಃ ತಾವೇ ಸಂಪುಟದಿಂದ ಹೊರಗುಳಿಯುವುದಾಗಿ ಪಕ್ಷದ ನಾಯಕರಿಗೆ ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ, ಅವರು ನೂತನ ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಸುಷ್ಮಾ ಕುತೂಹಲ

ವಯಸ್ಸಿನ ಕಾರಣ ನೀಡಿ, ಸುಷ್ಮಾ ಸ್ವರಾಜ್‌ ಈ ಬಾರಿ ಲೋಕಸಭೆಗೆ ಸ್ಪರ್ಧಿಸಿರಲಿಲ್ಲ. ಆದರೆ ಹಿಂದಿನ ಸಂಪುಟದ ಅತ್ಯಂತ ಜನಪ್ರಿಯ ಸಚಿವರ ಪೈಕಿ ಸುಷ್ಮಾ ಕೂಡಾ ಒಬ್ಬರು. ಆದರೆ ಅವರನ್ನು ಸಚಿವರಾಗಿ ಆಯ್ಕೆ ಮಾಡಿದರೆ, ಅವರನ್ನು 6 ತಿಂಗಳಲ್ಲಿ ರಾಜ್ಯಸಭೆಗೆ ಆಯ್ಕೆ ಮಾಡಬೇಕು. ಹೀಗಾಗಿ ಸುಷ್ಮಾ ಸಂಪುಟ ಸೇರ್ಪಡೆ ಬಗ್ಗೆ ಇನ್ನೂ ಕುತೂಹಲ ಹಾಗೆಯೇ ಇದೆ.

ಪಕ್ಷಗಳಿಗೆ ಎಷ್ಟೆಷ್ಟು?

ಶಿವಸೇನೆ ಮತ್ತು ಜೆಡಿಯು ತಲಾ 2, ಶಿರೋಮಣಿ ಅಕಾಲಿದಳ, ಎಐಎಡಿಎಂಕೆ, ಎಲ್‌ಜೆಪಿಗೆ ತಲಾ ಒಂದು ಸ್ಥಾನ ನೀಡಲಾಗುವುದು ಎನ್ನಲಾಗಿದೆ.

ಬಂಪರ್‌ ಸ್ಥಾನ ಕೊಟ್ಟವರಿಗೆ?

ಈ ಬಾರಿ ಪಕ್ಷಕ್ಕೆ ಭಾರೀ ಸ್ಥಾನ ಗೆದ್ದುಕೊಟ್ಟಯುಪಿ, ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢಕ್ಕೆ ಹೆಚ್ಚಿನ ಸ್ಥಾನ ಕಲ್ಪಿಸಲು ನಿರ್ಧರಿಸಲಾಗಿದೆ. ಇನ್ನು ರಾಜಕೀಯ ಕಾರಣಗಳಿಗಾಗಿ ಪಶ್ಚಿಮ ಬಂಗಾಳ, ಒಡಿಶಾ ಮತ್ತು ತೆಲಂಗಾಣ ರಾಜ್ಯಗಳಿಗೂ ಹೆಚ್ಚಿನ ಒತ್ತು ನೀಡಲಾಗುವುದು.