ದೇಶದಲ್ಲಿ ಮಹಿಳೆಯರಿಗೆ ಸಿಗುತ್ತಿಲ್ಲ ಸೂಕ್ತ ಅವಕಾಶ | ಇದರಿಂದ ಹಿಂದುಳಿದ ಮಹಿಳೆಯರು: ಹರೀಶ್ ಬಿಜೂರು 

ಬೆಂಗಳೂರು : ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿದರೆ ಮಾತ್ರ ಭಾರತ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಬ್ರ್ಯಾಂಡ್ ಗುರು ಹರೀಶ್ ಬಿಜೂರು ಹೇಳಿದ್ದಾರೆ.

ಏಷ್ಯಾನೆಟ್ ನ್ಯೂಸೆಬಲ್ ವತಿಯಿಂದ ಮಂಗಳವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ‘ಪಿಂಕ್ ಹೀರೋಸ್’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದರು. ದೇಶದಲ್ಲಿ ಮಹಿಳೆಯರಿಗೆ ಸೂಕ್ತ ಅವಕಾಶಗಳು ಸಿಗುತ್ತಿಲ್ಲ. ಇದರಿಂದಾಗಿ ಮಹಿಳೆಯರ ಅಭಿವೃದ್ಧಿಯಲ್ಲಿ ಹಿಂದುಳಿಯುತ್ತಿದ್ದಾರೆ. ಅವರಿಗೂ ಸಮಾನ ಅವಕಾಶಗಳು ಸಿಗುವಂತಾಗಬೇಕು. ಆಗ ದೇಶ ಅಭಿವೃದ್ಧಿಗೆ ಸಹಕಾರಿ ಎಂದುರು.

ನಮ್ಮ ಬೆಂಗಳೂರು ಪ್ರತಿಷ್ಠಾನದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಧರ್ ಪಬ್ಬಿಸೆಟ್ಟಿ ಮಾತನಾಡಿ, ಅತ್ಯಾಚಾರ, ಕೊಲೆ, ಹಲ್ಲೆಯಂತಹ ಕೃತ್ಯಗಳಿಂದ ಮಹಿಳೆಯರನ್ನು ಕಾಪಾಡಲು ನಾವೆಲ್ಲರೂ ಮುಂದಾಗಬೇಕು.

ಏಷಿಯಾ ನ್ಯೂಸ್ ನೆಟ್‌ವರ್ಕ್ ಗ್ರೂಪ್ಸ್‌ನಿಂದ ‘ಪಿಂಕ್ ಸಮಾರಿಟನ್’ ಎಂಬ ಮಹಿಳಾ ಸುರಕ್ಷತಾ ಆ್ಯಪ್‌ಅನ್ನು ಪರಿಚಯಿಸಲಾಗಿದೆ. ಬೆಂಗಳೂರು ಪೊಲೀಸರಿಂದ ಸ್ಥಾಪನೆಯಾಗಿರುವ ಸುರಕ್ಷಾ ಸೇರಿದಂತೆ ಇನ್ನಿತರ ಬೇರೆ ಬೇರೆ ಸಂಘಗಳಿಂದ ಬೆಂಗಳೂರಿನಲ್ಲಿ ಮಹಿಳೆಯರು ಸುರಕ್ಷಿತವಾಗಿ ಮನೆ ತಲುಪಲು ಸಹಾಯವಾಗುತ್ತಿದೆ ಎಂದು ವಿವರಿಸಿದರು.

ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಮಾತನಾಡಿ, ಮಗಳು ಮನೆಗೆ ಬರುವುದು ವಿಳಂಬವಾದ ಸಂದರ್ಭದಲ್ಲಿ ಮಹಿಳೆಯರ ಬಗ್ಗೆ ಭಯದ ವಾತಾವರಣ ನಿರ್ಮಾಣವಾಗಲಿದೆ. ಆದ್ದರಿಂದ ನಮ್ಮೊಂದಿಗೆ ಕರ್ತವ್ಯ ನಿರ್ವಹಿಸುವ ಮಹಿಳೆಯರನ್ನು ಬೇಗ ಕಳುಹಿಸಲು ಕ್ರಮ ಕೈಗೊಳ್ಳುತ್ತಿದ್ದೇನೆ. ಆ ಮೂಲಕ ಮಹಿಳೆಯರ ರಕ್ಷಣೆಗೆ ಎಚ್ಚರಿಕೆ ವಹಿಸುತ್ತಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಮಹಿಳೆಯರ ರಕ್ಷಣೆಗಾಗಿ ಆ್ಯಪ್ ಸಿದ್ಧಪಡಿಸಿರುವ ನಿಷಿತ್ ರಸ್ತೋಗಿ, ಇನ್‌ಪ್ಯೂಟ್ ಸಂಸ್ಥೆಯ ವಿಜಯ್‌ಆನಂದ್, ಡಿಸಿಪಿ ನಾಗೇಂದ್ರ ಅವರಿಗೆ ‘ಪಿಂಕ್ ಹಿರೋಸ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು.