ರಾಷ್ಟ್ರಪತಿ ಬಾಡಿಗಾರ್ಡ್‌ ನೇಮಕದಲ್ಲಿ ‘ಜಾತಿ ರಾಜಕೀಯ’:  ಹೈಕೋರ್ಟಲ್ಲಿ ದಾವೆ |  ಕೇವಲ 3 ಜಾತಿಗಳಿಗೆ ಪ್ರಾಧಾನ್ಯತೆ |  ನೇಮಕ ರದ್ದುಗೊಳಿಸುವಂತೆ ಅರ್ಜಿ |  ಕೇಂದ್ರ ಸರ್ಕಾರ, ಸೇನಾ ಮುಖ್ಯಸ್ಥರಿಗೆ ಕೋರ್ಟ್‌ ನೋಟಿಸ್‌ 

ನವದೆಹಲಿ (ಡಿ. 27):  ರಾಷ್ಟ್ರಪತಿಗಳ ಅಂಗರಕ್ಷಕರಾಗಿ ಕೇವಲ ಮೂರು ಜಾತಿಯವರಿಗೆ ಪ್ರಾಧಾನ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿ ದಿಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಕೇಂದ್ರ ಸರ್ಕಾರದ ವಿವಿಧ ಅಧಿಕಾರಿಗಳು, ರಾಷ್ಟ್ರಪತಿಗಳ ಅಂಗರಕ್ಷಕ ಪಡೆಯ ಮುಖ್ಯಸ್ಥರು ಹಾಗೂ ಸೇನಾ ಮುಖ್ಯಸ್ಥರಿಗೆ ನೋಟಿಸ್‌ ಜಾರಿ ಮಾಡಿದೆ.

ಇದಕ್ಕೆ ಸಂಬಂಧಿಸಿದಂತೆ 4 ವಾರಗಳಲ್ಲಿ ಉತ್ತರ ನೀಡಬೇಕು ಎಂದೂ ಸೂಚಿಸಿರುವ ನ್ಯಾಯಪೀಠ, ಮೇ 8ಕ್ಕೆ ವಿಚಾರಣೆ ಮುಂದೂಡಿದೆ.

ಜಾಟ್‌, ರಜಪೂತ ಹಾಗೂ ಜಾಟ್‌ ಸಿಖ್ಖರಿಗೆ ಮಾತ್ರ ರಾಷ್ಟ್ರಪತಿಗಳ ಅಂಗರಕ್ಷಕ ಹುದ್ದೆ ನೀಡಲಾಗಿದ್ದು, ಈ ಸಂಬಂಧ 2017ರ ಸೆ.4ರಂದು ನಡೆದ ನೇಮಕಾತಿಗಳನ್ನು ರದ್ದು ಮಾಡಬೇಕು ಎಂದು ಹರ್ಯಾಣದ ಗೌರವ್‌ ಯಾದವ್‌ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ತಾನು ಯಾದವ್‌/ಅಹಿರ್‌ ಸಮುದಾಯಕ್ಕೆ ಸೇರಿದ್ದು ಅಂಗರಕ್ಷಕನಾಗುವ ಸಕಲ ಅರ್ಹತೆ ಹೊಂದಿದ್ದೇನೆ. ಆದರೆ ಕೇವಲ ಈ ಮೇಲಿನ 3 ಜಾತಿಯವರಿಗೆ ಮಾತ್ರ ನೇಮಕದಲ್ಲಿ ಪ್ರಾಧಾನ್ಯತೆ ನೀಡಲಾಗಿದೆ ಎಂದು ಅವರು ದೂರಿದ್ದರು.