ನವದೆಹಲಿ(ಸೆ.8): ಅಮೆರಿಕ ಮೂಲದ ಪೊಕೆಮನ್ ಗೋ ಆಟವನ್ನು ಅಭಿವೃದ್ಧಿಪಡಿಸಿದ ಸಂಸ್ಥೆಗೆ ಗುಜರಾತ್ ಹೈಕೋರ್ಟ್ ನೋಟಿಸ್ ನೀಡಿದೆ. ಧಾರ್ಮಿಕ, ಪುಣ್ಯಸ್ಥಳಗಳಲ್ಲಿ ಮೊಟ್ಟೆಗಳು ಇರುವಂತೆ ಆಟದಲ್ಲಿ ತೋರಿಸಿರುವುದು ನಮ್ಮ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುತ್ತದೆ ಎಂದು ಆರೋಪಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯೊಂದು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ನೋಟಿಸ್ ನೀಡಿದೆ. ಪೊಕೆಮನ್ ಆಡುವಾಗ ಮೊಟ್ಟೆಗಳು ಪೂಜಾಸ್ಥಳಗಳಲ್ಲಿ ಕಂಡುಬರುವಂತೆ ಮಾಡಲಾಗಿದೆ. ಜೈನರು ಹಾಗೂ ಹಿಂದೂಗಳಲ್ಲಿ ಅನೇಕರು ಸಸ್ಯಾಹಾರಿಗಳಾಗಿರುವ ಕಾರಣ, ಮೊಟ್ಟೆಯಿಂದಾಗಿ ದೇಗುಲಗಳನ್ನು ಅಪವಿತ್ರಗೊಳಿಸಿದಂತಾಗುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು. ಈ ಕುರಿತು ಸ್ಯಾನ್‌ಫ್ರಾನ್ಸಿಸ್ಕೊದ ಪೊಕೆಮನ್ ಸಂಸ್ಥೆಗೆ ಇಮೇಲ್ ಮೂಲಕ ನೋಟಿಸ್ ಕಳುಹಿಸುವಂತೆ ಕೋರ್ಟ್ ಸೂಚಿಸಿದೆ.