ಲಕ್ನೋ(ಜೂ.20): ಮದುವೆ ಸಮಾರಂಭವೊಂದರಿಂದ ಮರಳುತ್ತಿದ್ದ 30 ಮಂದಿಯಿದ್ದ ಪಿಕ್ ಅಪ್ ವಾಹನವೊಂದು ಕಾಲುವೆಗೆ ಉರುಳಿರುವ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿದೆ. ಕಾಲುವೆಗೆ ಬಿದ್ದಿದ್ದ 22 ಜನರನ್ನು ರಕ್ಷಿಸಲಾಗಿದ್ದು, 7 ಮಕ್ಕಳು ನಾಪತ್ತೆಯಾಗಿದ್ದಾರೆ. 

ಲಕ್ನೋದ ನಗ್ರಂ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ವಾ ಖೇಡಾ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಈ ವ್ಯಾನ್‍ನಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದಂತೆ ಸುಮಾರು 30 ಜನರಿದ್ದರು. ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿ ಇಂದು ಮುಂಜಾನೆ ಮರಳುತ್ತಿದ್ದಾಗ ಇಂದಿರಾ ಕಾಲುವೆಗೆ ವ್ಯಾನ್ ಉರುಳಿ ಬಿದ್ದಿದೆ. ಘಟನೆಯಲ್ಲಿ 22 ಮಂದಿಯನ್ನು ರಕ್ಷಿಸಲಾಗಿದ್ದು, 7 ಮಕ್ಕಳು ನಾಪತ್ತೆಯಾಗಿದ್ದಾರೆ. ತೀವ್ರ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಮಕ್ಕಳೆಲ್ಲರೂ ಜಲಸಮಾಧಿಯಾಗಿರುವ ಶಂಕೆ ವ್ಯಕ್ತವಾಗಿದೆ. 

NDRF ಹಾಗೂ SDRF ರಕ್ಷಣಾ ತಂಡಗಳು ಕಾಲುವೆಯಲ್ಲಿ ಶೋಧ ಮುಂದುವರಿಸಿವೆ. ಜಿಲ್ಲಾಡಳಿತ ಅಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.