ದುನಿಯಾ ರಶ್ಮಿ ಅವರ ನಿವಾಸದ ಟೆರೇಸ್‌ನಿಂದ ಬಿದ್ದು ಯುವ ಛಾಯಾಗ್ರಾಹಕನೊಬ್ಬ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಭಾನುವಾರ ತಡ ರಾತ್ರಿ ನಡೆದಿದೆ.

 ಬೆಂಗಳೂರು :  ಚಿತ್ರನಟಿ ದುನಿಯಾ ರಶ್ಮಿ ಅವರ ನಿವಾಸದ ಟೆರೇಸ್‌ನಿಂದ ಬಿದ್ದು ಯುವ ಛಾಯಾಗ್ರಾಹಕನೊಬ್ಬ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಭಾನುವಾರ ತಡ ರಾತ್ರಿ ನಡೆದಿದೆ.

ಸುಂಕದಕಟ್ಟೆಯ ಭಾರತ್‌ ನಗರದ 2ನೇ ಹಂತದ ನಿವಾಸಿ ಪ್ರತೀಕ್‌ (28) ಮೃತ ದುರ್ದೈವಿ. ಮನೆಯ ಟೆರೇಸ್‌ನಲ್ಲಿ ರಶ್ಮಿ ಸೋದರ ಅರುಣ್‌ ಕುಮಾರ್‌ ಸ್ನೇಹಿತನಾದ ಪ್ರತೀಕ್‌, ರಾತ್ರಿ 12 ಗಂಟೆಯಲ್ಲಿ ಮದ್ಯ ಸೇವಿಸುವಾಗ ಈ ಘಟನೆ ನಡೆದಿದೆ. ಈ ಸಾವಿನ ಬಗ್ಗೆ ಮೃತನ ಕುಟುಂಬದವರು ಶಂಕಿಸಿದ ಹಿನ್ನೆಲೆಯಲ್ಲಿ ಅನುಮಾನಾಸ್ಪದ ಸಾವು ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಅನ್ನಪೂಣೇಶ್ವರಿ ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದು, ದುನಿಯಾ ರಶ್ಮಿ ಕುಟುಂಬಕ್ಕೆ ಸಂಕಷ್ಟಎದುರಾಗಿದೆ.

"

ನಟಿ ದುನಿಯಾ ರಶ್ಮಿ, ತಮ್ಮ ಕುಟುಂಬದ ಜತೆ ಅನ್ನಪೂಣೇಶ್ವರಿ ನಗರ ಸಮೀಪದ ಡಿ ಗ್ರೂಪ್‌ ಲೇಔಟ್‌ನಲ್ಲಿ ನೆಲೆಸಿದ್ದಾರೆ. ಅವರ ಸೋದರ ಅರುಣ್‌ ಕುಮಾರ್‌ ಮೊಬೈಲ್‌ ಅಂಗಡಿ ನಡೆಸುತ್ತಿದ್ದು, ಆರು ತಿಂಗಳ ಹಿಂದೆ ಆತನಿಗೆ ಪ್ರತೀಕ್‌ ಪರಿಚಯವಾಗಿತ್ತು. ಈ ಗೆಳೆತನದಲ್ಲಿ ಆಗಾಗ್ಗೆ ಮನೆಗೆ ಬಂದು ಆತ ಹೋಗುತ್ತಿದ್ದ. ಆ ವೇಳೆ ರಶ್ಮಿ ಅವರಿಗೂ ಸಹ ಪ್ರತೀಕ್‌ ಪರಿಚಿತನಾಗಿದ್ದ. ಇದೇ ವಿಶ್ವಾಸದಲ್ಲಿ ರಶ್ಮಿ ಅವರ ಫೋಟೋ ಶೂಟ್‌ ಅನ್ನು ಕೂಡಾ ಆತ ಮಾಡಿದ್ದ ಎಂದು ಮೂಲಗಳು ಹೇಳಿವೆ.

ಮಾಮೂಲಿ ದಿನದಂತೆ ಭಾನುವಾರ ರಾತ್ರಿ ಗೆಳೆಯನ ಅರುಣ್‌ ಮನೆಗೆ ಪ್ರತೀಕ್‌ ಬಂದಿದ್ದ. ಬಳಿಕ ಮೂರು ಅಂತಸ್ತಿನ ಮನೆಯ ಟೆರೇಸ್‌ಗೆ ತೆರಳಿದ ಗೆಳೆಯರು, ಅಲ್ಲಿ ಕುಳಿತು ಪಾರ್ಟಿ ಮಾಡುತ್ತಿದ್ದರು. ರಾತ್ರಿ 11ರ ಸುಮಾರಿಗೆ ಟೆರೇಸ್‌ನಿಂದ ಕೆಳಗೆ ಬಿದ್ದ ಪ್ರತೀಕ್‌ ತಲೆಗೆ ಗಂಭೀರ ಪೆಟ್ಟಾಗಿದೆ. ತಕ್ಷಣವೇ ಆತನನ್ನು ರಶ್ಮಿ ಕುಟುಂಬದವರು, ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಪ್ರತೀಕ್‌ ಕೊನೆಯುಸಿರೆಳೆದಿದ್ದಾನೆ. ಆದರೆ ಘಟನೆ ಹೇಗೆ ನಡೆದಿದೆ ಎಂಬುದು ಖಚಿತವಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರಶ್ಮಿ ಕುಟುಂಬದ ಮೇಲೆ ಶಂಕೆ?

ಛಾಯಗ್ರಾಹಕ ಸಾವಿನ ವಿಚಾರವನ್ನು ಬೆಳಗ್ಗೆ 6 ಗಂಟೆ ಸುಮಾರಿಗೆ ಪೊಲೀಸರಿಗೆ ರಶ್ಮಿ ಕುಟುಂಬ ತಿಳಿಸಿದೆ. ಇತ್ತ ಪ್ರತೀಕ್‌ ಕುಟುಂಬದವರಿಗೆ ಘಟನೆ ಕುರಿತು ಯಾವುದೇ ಮಾಹಿತಿ ನೀಡದೆ ಅವರು ಗೌಪ್ಯವಾಗಿರಿಸಿದ್ದರು. ಪೊಲೀಸರು ಹೇಳಿದ ಬಳಿಕವೇ ಮೃತನ ಕುಟುಂಬದವರಿಗೆ ಗೊತ್ತಾಗಿದೆ. ಹೀಗಾಗಿ ಮೃತಪಟ್ಟು ಹಲವು ತಾಸುಗಳು ಗತಿಸಿದ ಬಳಿಕ ಪೊಲೀಸರಿಗೆ ಪ್ರತೀಕ್‌ ಸಾವಿನ ವಿಷಯ ಹೇಳಿರುವ ರಶ್ಮಿ ಕುಟುಂಬದ ಮೇಲೆ ಪ್ರತೀಕ್‌ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಪುತ್ರನ ಸಾವಿನ ಬಗ್ಗೆ ಶಂಕೆ ಇದ್ದು, ಈ ಘಟನೆ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತೀಕ್‌ ಪೋಷಕರು ನೀಡಿದ ದೂರಿನ ಮೇರೆಗೆ ಅಸಹಜ ಸಾವು ಆರೋಪದಡಿ ಪ್ರಕರಣ ದಾಖಲಾಗಿದೆ. ಆದರೆ ಎಫ್‌ಐಆರ್‌ನಲ್ಲಿ ರಶ್ಮಿ ಕುಟುಂಬದ ಹೆಸರು ಉಲ್ಲೇಖವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಾಲು ಜಾರಿ ಬಿದ್ದಿದ್ದಾನೆ: ರಶ್ಮಿ ಸೋದರ

‘ಟೆರೇಸ್‌ನಲ್ಲಿ ರಾತ್ರಿ ನಾನು ಮತ್ತು ಪ್ರತೀಕ್‌ ಬಿಯರ್‌ ಸೇವಿಸುತ್ತಿದ್ದೆವು. ಆಗ 11.20 ಸುಮಾರಿಗೆ ಊಟ ತರಲು ಕೆಳೆಗಿಳಿದು ಬಂದಿದ್ದೆ. ಆಗ ಪ್ರತೀಕ್‌ ಜೋರಾಗಿ ಚೀರಿದ ಶಬ್ದ ಕೇಳಿ ಬಂದಿತು. ತಕ್ಷಣವೇ ನಾನು ಟೆರೇಸ್‌ಗೆ ದೌಡಾಯಿಸಿದೆ. ಆದರೆ ಅಲ್ಲಿನ ಆತ ಕಾಣಲಿಲ್ಲ. ಟೆರೇಸ್‌ನಿಂದ ಕೆಳಗೆ ನೋಡಿದಾಗ ರಕ್ತದ ಮಡುವಿನಲ್ಲಿ ಅವನು ಬಿದ್ದಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದೆವು. ಸ್ನೇಹಿತನ ಉಳಿಸಿಕೊಳ್ಳುವ ಓಡಾಟದಲ್ಲಿ ಪೊಲೀಸರಿಗಾಗಲಿ ಅಥವಾ ಆತನ ಕುಟುಂಬದವರಿಗಾಗಲಿ ತಿಳಿಸಲಾಗಲಿಲ್ಲ. ಪ್ರತೀಕ್‌ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ’ ಎಂದು ವಿಚಾರಣೆ ವೇಳೆ ಅರುಣ್‌ ಕುಮಾರ್‌ ಹೇಳಿಕೆ ಕೊಟ್ಟಿರುವುದಾಗಿ ಗೊತ್ತಾಗಿದೆ.