ಬೆಂಗಳೂರು[ಆ.29]: ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕೈಗಾ ಅಣುಸ್ಥಾವರ ಘಟಕದಲ್ಲಿ ಇರುವ ಗುಪ್ತದಳ ಘಟಕದ ಎಡಿಜಿಪಿ ದರ್ಜೆಯ ಅಧಿಕಾರಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಮುಂತಾದವರ ದೂರವಾಣಿಗಳನ್ನು ಕದ್ದಾಲಿಸುತ್ತಿದ್ದಾರೆ ಎಂದು ಜೆಡಿಎಸ್ ರಾಷ್ಟ್ರೀಯ ವಕ್ತಾರ ರಮೇಶ್ ಬಾಬು ಗಂಭೀರವಾಗಿ ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎರಡು ರೀತಿಯಲ್ಲಿ ದೂರವಾಣಿ ಕದ್ದಾಲಿಕೆ ನಡೆಯುತ್ತಿದೆ. ಒಂದು ಗುಪ್ತದಳ ವಿಭಾಗ ನಡೆಸುವ ಕದ್ದಾಲಿಕೆ, ಮತ್ತೊಂದು ಕೇಂದ್ರ ಸರ್ಕಾರ ನಡೆಸುತ್ತಿರುವ ಕದ್ದಾಲಿಕೆ.

ಈ ಪೈಕಿ ಕೈಗಾದಲ್ಲಿರುವ ಎಡಿಜಿಪಿ ಅಧಿಕಾರಿ ತಮಗೆ ವಹಿಸಿದ ಕೆಲಸ ಬಿಟ್ಟು ಕದ್ದಾಲಿಕೆ ಕೆಲಸ ಮಾಡುತ್ತಿರುವುದು ಅತ್ಯಂತ ಗಂಭೀರವಾದ ವಿಷಯವಾಗಿದ್ದು, ಕೇಂದ್ರ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ. ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.