ಹಣ ಕೊಟ್ರೆ ನಿಮ್ಮ ಡಾಟಾ ಆನ್‌ಲೈನ್‌’ನಲ್ಲಿ ಸಿಗುತ್ತೆ!

First Published 24, Feb 2018, 10:27 AM IST
Personal Data Sold Online
Highlights
  • ಇದೇ ಡಾಟಾ ಬಳಸಿ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಖದೀಮರು
  • ಸಾಫ್ಟ್‌ವೇರ್ ಕಂಪನಿ ಉದ್ಯೋಗಿಗಳ ಡಾಟಾಕ್ಕೆ ಹೆಚ್ಚಿನ ಡಿಮ್ಯಾಂಡ್

ಬೆಂಗಳೂರು : ಉದ್ಯೋಗಸ್ಥರೇ ಎಚ್ಚರ...! ನಿಮ್ಮ ಮಾಹಿತಿಯನ್ನು (ಡಾಟಾ) ಆನ್‌ಲೈನ್‌ನಲ್ಲೇ ಖರೀದಿಸಿರುವುದು ಮಾತ್ರವಲ್ಲದೆ ಅದೇ ಮಾಹಿತಿ ಬಳಸಿ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದಾರೆ ಚಾಲಾಕಿ ಆನ್‌ಲೈನ್ ವಂಚಕರು..!

ಹೌದು ಇಂತಹದ್ದೊಂದು ಬಹುಮುಖ್ಯ ವಿಷಯವು ಕೆಲ ತಿಂಗಳ ಹಿಂದೆ ಸಿಐಡಿ ಸೈಬರ್ ಕ್ರೈಂ ಪೊಲೀಸರಿಗೆ ಬಲೆಗೆ ಬಿದ್ದ ಆನ್‌ಲೈನ್ ವಂಚಕರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸೋಜಿಗವೆಂದರೆ ಪ್ರತಿಷ್ಠಿತ ಆನ್‌ಲೈನ್ ಮಾರುಕಟ್ಟೆ ಸಂಸ್ಥೆಗಳಿಂದಲೇ ಡಾಟಾ ಮಾರಾಟ ವಾಗುತ್ತಿದೆ. ಇದು ವಂಚಕರಿಗೆ ವರದಾನವಾದರೆ, ಸೈಬರ್ ಅಧಿಕಾರಿಗಳಿಗೆ ಬಾರಿ ತಲೆ ನೋವು ತಂದಿದೆ. ಆದರೆ. ತಾಂತ್ರಿಕ ತೊಂದರೆ ಕಾರಣಕ್ಕೆ ಆನ್‌ಲೈನ್ ಮಾರುಕಟ್ಟೆ ಡಾಟಾ ಮಾರಾಟ ವಿಚಾರ ಗೊತ್ತಿದ್ದರೂ ಏನೂ ಮಾಡಲಾಗದಂತಹ ಪರಿಸ್ಥಿತಿ ಅಧಿಕಾರಿಗಳಿಗೆ ಎದುರಾಗಿದೆ.

ಈಗ ಆನ್‌ಲೈನ್‌ನಲ್ಲಿ ಉದ್ಯೋಗಸ್ಥರ ಮೊಬೈಲ್ ಸಂಖ್ಯೆ ಸೇರಿದಂತೆ ಹಲವು ಸಂಗತಿಗಳನ್ನೊಳಗೊಂಡ ವಿವರಗಳು (ಡಾಟಾ)ಗಳು ಮಾರ್ಕೆಟ್‌ನಲ್ಲೇ ಹಣಕ್ಕೆ ಸಿಗುತ್ತಿವೆ. ಇದರಲ್ಲಿ ಸಾಫ್ಟ್‌ವೇರ್ ಕಂಪನಿಗಳ ಉದ್ಯೋಗಿಗಳ ಡಾಟಾಕ್ಕೆ ಹೆಚ್ಚಿನ ಬೇಡಿಕೆ ಇದೆ. ಇದೇ ಮಾಹಿತಿ ಖರೀದಿಸಿ ಆನ್‌ಲೈನ್ ವಂಚಕರು ‘ಲಾಭ’ ಗಳಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಕೆಲ ದಿನಗಳ ಹಿಂದೆ ಬಾಟಂ ಫಿಶಿಂಗ್ ದಂಧೆ ಮೂಲಕ ಸಾರ್ವಜನಿಕರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿದ ಆರೋಪದಡಿ ಜಾರ್ಖಂಡ್ ಮೂಲದ ನಾಲ್ವರು ಡಿಪ್ಲೊಮಾ ವಿದ್ಯಾರ್ಥಿಗಳನ್ನು ಬಂಧಿಸಿದ್ದರು. ಇವರ ವಿಚಾರಣೆ ವೇಳೆ ಆನ್‌ಲೈನ್‌ನಲ್ಲೇ ಡಾಟಾ ಖರೀದಿಸಿದ್ದ ಸಂಗತಿ ಗೊತ್ತಾಯಿತು ಎಂದು ಅಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.

ಹೇಗೆ ವಂಚನೆ?:

ಈಗ ಆನ್‌ಲೈನ್‌ನಲ್ಲಿ ಖಾಸಗಿ ಕಂಪನಿಗಳ ಡಾಟಾಗಳು ಕೇವಲ ₹500ರಿಂದ ₹1000ಕ್ಕೆಲ್ಲ ಸಿಗುತ್ತವೆ. ಈ ಡಾಟಾ ಖರೀದಿಸುವ ಆನ್‌ಲೈನ್ ವಂಚಕರು, ನಂತರ ಸದರಿ ಉದ್ಯೋಗಸ್ಥನ ಬ್ಯಾಂಕ್‌ಗೆ ಕನ್ನ ಹಾಕುತ್ತಾರೆ.

ಬಾಟಂ ಫಿಶಿಂಗ್ ದಂಧೆಯಲ್ಲಿ ಸೆರೆಯಾಗಿದ್ದ ಕಪಿಲ್, ತನ್ನ ಕೃತ್ಯಕ್ಕೆ ಆನ್‌ಲೈನ್ ಲಭ್ಯವಿದ್ದ ಡಾಟಾ ಬಳಸಿದ್ದಾನೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಈ ಜಾಲವು ಕರ್ನಾಟಕವೂ ಸೇರಿದಂತೆ 24 ರಾಜ್ಯಗಳಲ್ಲಿ ವಿಸ್ತರಿಸಿತ್ತು. ವಿಶೇಷವೆಂದರೆ ವಂಚನೆಗೊಳಗಾದವರ ಪೈಕಿ ಬಹುತೇಕರು ಖಾಸಗಿ ಕಂಪನಿ ಉದ್ಯೋಗಳಾಗಿದ್ದರು. ಇನ್ನೂ ಕೆಲವರು ಕ್ಯಾಬ್ ಚಾಲಕರಾಗಿದ್ದರು. ಇದುವರೆಗೆ 200ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ.

2017ರ ಮೇ 5ರಂದು ಜಿಗಣಿಯ ಕ್ಯಾಬ್ ಚಾಲಕ ಸುರೇಶ್ ಎಂಬುವರ 2 ಬ್ಯಾಂಕ್ ಖಾತೆಗಳಿಂದ ₹7 ಸಾವಿರ ಎಗರಿಸಿದ್ದರು. ಮೊಬೈಲ್ ಕರೆ ವಿವರ (ಸಿಡಿಆರ್) ಹಾಗೂ ಐಪಿ ವಿಳಾಸ ಆಧರಿಸಿ ತನಿಖೆಗಿಳಿದ ಸಿಐಡಿ ಸೈಬರ್ ಕ್ರೈಂ ಪೊಲೀಸರು, ಬೆಂಗಳೂರು ಹಾಗೂ ಜಾರ್ಖಂಡ್‘ನಲ್ಲಿ ಕಾರ್ಯಾಚರಣೆ ನಡೆಸಿದ್ದರು. ಬಳಿಕ ಜುಲೈ 25ರಂದು ಜಾರ್ಖಂಡ್‌ನ ಕಪಿಲ್ ದೇವ್, ಸೂರಜ್ ಕುಮಾರ್, ಸುಶೀಲ್ ಕುಮಾರ್, ಸುಮನ್ ಹಾಗೂ ಬಿಪ್ಲವ್ ಕುಮಾರ್ ಪೊಲೀಸರ ಬಲೆಗೆ ಬಿದ್ದಿದ್ದರು.

ಏನಿದು ಬಾಟಂ ಫಿಶಿಂಗ್?:

ಸಾರ್ವಜನಿಕರ ಬ್ಯಾಂಕ್ ಖಾತೆಗಳಿಂದ ಅಲ್ಪ ಮೊತ್ತದ ಹಣವನ್ನು ಅಕ್ರಮವಾಗಿ ತಮ್ಮ ಖಾತೆಗೆ ವರ್ಗಾಯಿಸಿ ಕೊಳ್ಳುವುದೇ ಬಾಟಂ ಫಿಶಿಂಗ್. ಸಣ್ಣ ಪ್ರಮಾಣದಲ್ಲಿ ಹಣ ಕಳೆದುಕೊಂಡರೆ ನಾಗರಿಕರು ಪೊಲೀಸರಿಗೆ ದೂರು ಕೊಡುವುದಿಲ್ಲ, ಒಂದು ವೇಳೆ ದೂರು ಕೊಟ್ಟರೂ ಕಡಿಮೆ ಮೊತ್ತವಾದ ಕಾರಣ ಪೊಲೀಸರು ತನಿಖೆ ನಡೆಸುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಪೊಲೀಸರಿಗೆ ಸಂಕಷ್ಟ:

ಆನ್‌ಲೈನ್ ಮಾರುಕಟ್ಟೆ ನಿಯಂತ್ರಣವೂ ಪೊಲೀಸ್ ವ್ಯಾಪ್ತಿಗೆ ಬರುವುದಿಲ್ಲ. ಅಲ್ಲದೆ ಬಹುತೇಕ ಕಂಪನಿಗಳ ಮುಖ್ಯ ಕಚೇರಿ ವಿದೇಶದಲ್ಲಿದೆ. ಹಾಗಾಗಿ ಆ ಕಂಪನಿಗಳ ಮೇಲೆ ಎಫ್‌ಐಆರ್ ದಾಖಲಿಸಲು ತಾಂತ್ರಿಕ ಸಮಸ್ಯೆಗಳಿವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಈ ಬಗ್ಗೆ ಚಾರ್ಜ್‌ಶೀಟ್‌ನಲ್ಲಿ ಸಹ ನಮೂದಿಸಲಾಗಿದೆ. ಆದರೆ ಅವುಗಳ ಮೇಲೆ ನಿಷೇಧ ಅಥವಾ ನಿಯಂತ್ರಣ ಹೇರುವ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕಿದೆ. ಬಹುರಾಷ್ಟ್ರೀಯ ಕಂಪನಿಗಳ ಸಿಇಓಗಳ ಮೊಬೈಲ್ ಸಂಖ್ಯೆಯೇ ಆನ್‌ಲೈನ್‌ನಲ್ಲಿ ಸಿಗುತ್ತದೆ. ಈ ಬಗ್ಗೆ ಆಯಾ ಕಂಪನಿಗಳ ಸಹ ಎಚ್ಚೆತ್ತುಕೊಳ್ಳಬೇಕು ಎಂದು ಅಧಿಕಾರಿಗಳ ಅಭಿಪ್ರಾಯವಾಗಿದೆ.

 

 

 

 

loader