ಬೆಂಗಳೂರು (ಆ. 16): ಮಹಿಳೆಯರಿಗೆ ಭೂಸೇನೆಯಲ್ಲೂ ಪರ್ಮನೆಂಟ್ ಕಮೀಷನ್ (ಕಾಯಂ ಸೇವೆ) ನೀಡುವ ಕುರಿತು ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ.

ಇದುವರೆಗೆ ಭೂಸೇನೆಯಲ್ಲಿ ಮಹಿಳೆಯರಿಗೆ ಶಾರ್ಟ್ ಸರ್ವೀಸ್ ಕಮೀಷನ್'ನಲ್ಲಿ ಮಾತ್ರ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಇನ್ನು ಮುಂದೆ ದೇಶದ ಧೈರ್ಯವಂತ ಹೆಣ್ಣುಮಕ್ಕಳಿಗೂ ಪರ್ಮನೆಂಟ್ ಕಮಿಷನ ನೀಡಲಾಗುವುದು ಎಂದು ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಘೋಷಣೆ ಮಾಡಿದರು. ಆದರೆ ಕಾಯಂ ಸೇವೆಗೆ ಬಳಸಿಕೊಂಡ ಹೊರತಾಗಿಯೂ ಮಹಿಳೆಯರನ್ನು ಯುದ್ಧ ಭೂಮಿಗೆ ಕಳುಹಿಸಲಾಗುವುದೇ ಇಲ್ಲವೇ ಎಂಬುದನ್ನು ಪ್ರಧಾನಿ ಬಹಿರಂಗಪಡಿಸಲಿಲ್ಲ.

ಈ ಕುರಿತ ನೀತಿಯನ್ನು ಸರ್ಕಾರ ಶೀಘ್ರವೇ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಾಗಲೇ ಭಾರತೀಯ ವಾಯುಪಡೆಯಲ್ಲಿ ಮಹಿಳೆಯರನ್ನು ಪರ್ಮನೆಂಟ್ ಕಮೀಷನ್ ಅಡಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅವರನ್ನು ಯುದ್ಧ ವಿಮಾನಗಳ ಸಂಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ.