ಮಹಾಪುರುಷರ ನಿಂದಕರನ್ನು ಜೈಲಿಗೆ ಅಟ್ಟಬೇಕು ಎಂದು ಯೋಗ ಗುರು ಬಾಬಾ ರಾಮದೇವ್‌ ಹೇಳಿದರು

ವಿಜಯಪುರ[ಡಿ.30]: ಮಹಾನ್‌ ಪುರುಷರ ಬಗ್ಗೆ ಕೆಟ್ಟದಾಗಿ ಮಾತನಾಡುವವರನ್ನು ಜೈಲಿಗೆ ಅಟ್ಟಬೇಕು ಎಂದು ಯೋಗ ಗುರು ಬಾಬಾ ರಾಮದೇವ್‌ ಹೇಳಿದರು. ಈ ಮೂಲಕ ಪರೋಕ್ಷವಾಗಿ ಸಾಹಿತಿ ಕೆ.ಎಸ್‌.ಭಗವಾನ್‌ ವಿರುದ್ಧ ಕಿಡಿಕಾರಿದರು.

ಶನಿವಾರ ನಗರದಲ್ಲಿ ಯೋಗ ಪ್ರಚಾರಕ ಬೈಕ್‌ ರಾರ‍ಯಲಿಗೆ ಚಾಲನೆ ನೀಡಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ರಾಷ್ಟ್ರ ನಾಯಕರ ಹಾಗೂ ಮಹಾನ್‌ ಪುರುಷರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಸರಿಯಲ್ಲ. ಈ ರೀತಿ ಮಾಡುವುದು ಸಂವಿಧಾನಕ್ಕೆ ಅಪಚಾರ ಮಾಡಿದಂತಾಗುತ್ತದೆ ಎಂದು ಹೇಳಿದರು.

ಯಾರಾದರೂ ಸರಿಯೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಕುರಾನ್‌, ಬೈಬಲ್‌ ಬಗ್ಗೆ ಮಾತನಾಡಲು ಸಾಧ್ಯವಿಲ್ಲವೋ ಹಾಗೇ ಮಹಾಪುರುಷರ ಹಾಗೂ ರಾಷ್ಟ್ರ ನಾಯಕರ ವಿರುದ್ಧವೂ ಮಾತನಾಡಬಾರದು. ರಾಷ್ಟ್ರ ನಾಯಕರು ಹಾಗೂ ಮಹಾಪುರುಷರ ಬಗ್ಗೆ ಕೆಟ್ಟದಾಗಿ ಮಾತನಾಡುವವರನ್ನು ಜೈಲಿಗೆ ಅಟ್ಟಬೇಕು ಎಂದರು.

ಮಹಾಪುರುಷರು, ರಾಷ್ಟ್ರೀಯ ನಾಯಕರ ವಿರುದ್ಧ ತಪ್ಪು ಹೇಳಿಕೆ ನೀಡುವುದು ಅಪರಾಧ. ನಾವು ನಮ್ಮ ರಾಷ್ಟ್ರೀಯ ಪುರುಷರಿಗೆ ಅಪಮಾನ ಮಾಡಬಾರದು. ಈ ರೀತಿ ಅಪಮಾನ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ ಅವರು, ವಾಲ್ಮೀಕಿ ರಾಮಾಯಣದಲ್ಲಿ ರಾಮನ ಕುರಿತು ಯಾವುದೇ ರೀತಿಯ ಕೆಟ್ಟಪ್ರಸ್ತಾಪವಿಲ್ಲ ಎಂದು ಇದೇ ವೇಳೆ ತಿಳಿಸಿದರು.