ಆನೇಕಲ್‌ :  1 ಲಕ್ಷ ನೀಡಿದರೆ .10 ಲಕ್ಷ ನೀಡುವೆ. .25 ಲಕ್ಷ ಕೊಟ್ಟರೆ .1 ಕೋಟಿ ಖಚಿತ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೇ ನನಗೆ ಬಾಂಡ್‌ ನೀಡಿದ್ದಾರೆ. ಈ ಹಣ ಬಂದ ಕೂಡಲೆ ಎಲ್ಲರಿಗೂ ಹಣ ಹಂಚುವೆ ಎಂದು ನಂಬಿಸಿ .25 ಕೋಟಿಗೂ ಹೆಚ್ಚು ಹಣವನ್ನು ಅಮಾಯಕ ರೈತರಿಂದ ವಸೂಲು ಮಾಡಿ ವ್ಯಕ್ತಿಯೋರ್ವ ವಂಚಿಸಿರುವ ಘಟನೆ ಆನೇಕಲ್‌ ಠಾಣಾ ವ್ಯಾಪ್ತಿಯ ಚೂಡೇನಹಳ್ಳಿಯಲ್ಲಿ ನಡೆದಿದೆ.

ರಾಮಚಂದ್ರಾಚಾರಿ ಜನರಿಗೆ ಕೋಟಿ ಕೋಟಿ ವಂಚನೆ ಮಾಡಿದ ಆರೋಪಿ. ರೈತರು ಹಣವನ್ನು ವಾಪಸ್‌ ಕೇಳಿದಾಗ ವಿಷ ಕುಡಿದ ನಾಟಕವಾಡಿದ ರಾಮಚಂದ್ರಾಚಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಇತ್ತ ಹಣವನ್ನು ಕಳೆದುಕೊಂಡ ರೈತರು ಆನೇಕಲ್‌ ಠಾಣೆಯ ಮುಂದೆ ಜಮಾಯಿಸಿ, ವಂಚಕನಿಂದ ಹಣ ವಾಪಸ್‌ ಕೊಡಿಸಿ ಎಂದು ದೂರು ನೀಡಿದ್ದಾರೆ.

ಮೂಲತಃ ನೆಲಮಂಗಲ ತಾಲೂಕಿನ ತಾವರೆಕೆರೆ ನಿವಾಸಿಯಾದ ರಾಮಚಂದ್ರಾಚಾರಿ, ಅಲ್ಲಿನ ಜನರಿಗೆ ಮೋಸವೆಸಗಿ 25 ವರ್ಷಗಳ ಹಿಂದೆ ಆನೇಕಲ್‌ ತಾಲೂಕಿನ ಚೂಡೇನಹಳ್ಳಿಗೆ ಬಂದು ನೆಲೆಸಿದ್ದ. ತನ್ನ ಹಳೆಯ ಚಾಳಿಯನ್ನು ಇಲ್ಲಿಯೂ ಮುಂದುವರಿಸಿದ ಆರೋಪಿ, ಸಿಎಂ ಕುಮಾರಸ್ವಾಮಿಯವರೇ .8,000 ಕೋಟಿ ಬಾಂಡ್‌ ನೀಡಿದ್ದಾರೆ ಎಂದು ನಕಲಿ ಬಾಂಡ್‌ ಒಂದನ್ನು ತೋರಿಸಿ ಜನರಿಂದ ಹಣವನ್ನು ಪೀಕಿಸಿದ್ದ.

ಠಾಣೆಗಳಿಗೂ ಸಾಷ್ಟಾಂಗ ನಮಸ್ಕಾರ!:

ಆನೇಕಲ್‌ ತಾಲೂಕಿನ ಜಿಗಣಿ, ಮಾಲೂರು, ಹೊಸಕೋಟೆ, ಬೆಂಗಳೂರು ಹೊರವಲಯದ ರೈತರನ್ನೇ ಗುರಿಯಾಗಿಸಿಕೊಂಡು ಹಣ ಸಂಗ್ರಹಿಸಿದ್ದ. ಇದೇ ವೇಳೆ ದೇಗುಲಗಳಿಗೆ ಅಪಾರ ಮೊತ್ತ ದೇಣಿಗೆ ಮತ್ತು ಹುಂಡಿಗೆ ಅಪಾರವಾದ ಹಣ ಹಾಕುವಂತೆ ನಟಿಸಿ ಜನರಿಗೆ ನಂಬಿಕೆ ಬರುವಂತೆ ಮಾಡಿದ್ದ. ಅಮಾಯಕ ರೈತರ ಜೊತೆಗೆ ಅಧಿಕಾರಿಗಳನ್ನೂ ಬಿಡದೇ ವಂಚಿಸಿದ್ದ. ಈತನ ನಯವಂಚಕ ಮಾತುಗಳಿಗೆ ಮರುಳಾದ ಜನ ಲಕ್ಷ ಲಕ್ಷ ಹಣ ನೀಡಿದ್ದರು.

ದೇಗುಲ ಮತ್ತು ಕೆಲ ಠಾಣೆಗಳಲ್ಲಿ ಈತನಿಗೆ ರಾಜಾಥಿತ್ಯ ಸಿಗುತ್ತಿತ್ತು. ಈತನ ಇನ್ನೊಂದು ವಿಶೇಷವೆಂದರೇ ದೇಗುಲದಲ್ಲಿ ನಮಸ್ಕರಿಸುವಂತೆ ಠಾಣೆಗಳಿಗೂ ಭೇಟಿ ನೀಡಿ ಹೊರ ಬರುವಾಗ ಕೃಷ್ಣನ ಜನ್ಮಸ್ಥಾನವೆಂದು ಓಳು ಬಿಟ್ಟು ಠಾಣೆಯ ಹೊರಗೆ ಬಂದು ಸಾಷ್ಟಾಂಗ ನಮಸ್ಕಾರ ಮಾಡುತ್ತಿದ್ದ. ಹೀಗೆ 300ಕ್ಕೂ ಹೆಚ್ಚು ಅಮಾಯಕ ರೈತರು, ವ್ಯಾಪಾರಿಗಳೂ ಮತ್ತು ಪೊಲೀಸರು ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳನ್ನು ಯಾಮಾರಿಸಿದ್ದಾನೆ ಎಂದು ಆನೇಕಲ್‌ ಪೊಲೀಸರು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ನನ್ನ ತಮ್ಮನನ್ನು ಕೆಲವರು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆನೇಕಲ್‌ ಠಾಣೆಗೆ ದೂರು ನೀಡಿ ತಮ್ಮನನ್ನು ಬಿಡಿಸಿಕೊಂಡು ಬಂದೆವು. ಬ್ಯಾಂಕಿಗೆ ಹೋಗಿ ಬರುವುದಾಗಿ ತಿಳಿಸಿದ ತಂದೆ ವಿಷ ಕುಡಿದಿರುವುದಾಗಿ ತಿಳಿದು ಬಂದಿದೆ. ನಮಗೇನೂ ತಿಳಿಯದು.

-ಗಂಗರಾಜು, ರಾಮಚಂದ್ರಚಾರಿ ಹಿರಿಯ ಮಗ