ಕುರುಗೋಡು ಪಟ್ಟಣದಿಂದ 4 ಕಿಮೀ ದೂರದ ಬಾದನಹಟ್ಟಿ, 5 ಕಿಮೀ ದೂರದ ಮುಷ್ಟಗಟ್ಟೆ, 12 ಕಿಮೀ ದೂರದ ಸಿರಿಗೇರಿ ಹಾಗೂ 15 ಕಿಮೀ ದೂರದ ಎಮ್ಮಿಗನೂರು ಹಾಗೂ 6 ಕಿಮೀ ದೂರದ ಯರಂಗಳಿಗಿ ರಸ್ತೆಗಳಲ್ಲಿ ಹೆಜ್ಜೆ ಹೆಜ್ಜೆಗೂ ಅಪಾಯಕಾರಿ ಗುಂಡಿಗಳಿವೆ. ಪಟ್ಟಣಕ್ಕೆ ವಾಣಿಜ್ಯ ವ್ಯವಹಾರ, ನಾನಾ ಕಚೇರಿ ಕೆಲಸ ಹಾಗೂ ಸಂತೆ, ಶಾಲಾ-ಕಾಲೇಜು, ಕಲ್ಲು ಗಣಿ ಉದ್ದಿಮೆಯ ಚಟುವಟಿಕೆಯಿಂದ ಪ್ರತಿದಿನ ವಾಹನಗಳ ಸಂಚಾರ ದಟ್ಟಣೆ ಹೆಚ್ಚಳವಾಗಿದೆ.

ಕುರುಗೋಡು(ನ.25): ಪಟ್ಟಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚರಿಸುವ ವಾಹನಗಳು ಅಲ್ಲಲ್ಲಿ ನಿಂತುಕೊಳ್ಳುತ್ತಿವೆ. ಇದರಿಂದ ಸವಾರರು ವಾಹನಗಳನ್ನು ತಳ್ಳಿಕೊಂಡು ಊರುಮುಟ್ಟುವ ಧಾವಂತ ಎದುರಾಗಿದೆ. ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸುವವರಿಗೆ ಊರು ಮುಟ್ಟುತ್ತೇವೋ ಇಲ್ಲವೋ ಎಂಬ ಭಯ ಕಾಡುತ್ತಿದೆ. ಪಟ್ಟಣದಿಂದ 4 ಕಿಮೀ ದೂರದ ಬಾದನಹಟ್ಟಿ, 5 ಕಿಮೀ ದೂರದ ಮುಷ್ಟಗಟ್ಟೆ, 12 ಕಿಮೀ ದೂರದ ಸಿರಿಗೇರಿ ಹಾಗೂ 15 ಕಿಮೀ ದೂರದ ಎಮ್ಮಿಗನೂರು ಹಾಗೂ 6 ಕಿಮೀ ದೂರದ ಯರಂಗಳಿಗಿ ರಸ್ತೆಗಳಲ್ಲಿ ಹೆಜ್ಜೆ ಹೆಜ್ಜೆಗೂ ಅಪಾಯಕಾರಿ ಗುಂಡಿಗಳಿವೆ. ಪಟ್ಟಣಕ್ಕೆ ವಾಣಿಜ್ಯ ವ್ಯವಹಾರ, ನಾನಾ ಕಚೇರಿ ಕೆಲಸ ಹಾಗೂ ಸಂತೆ, ಶಾಲಾ-ಕಾಲೇಜು, ಕಲ್ಲು ಗಣಿ ಉದ್ದಿಮೆಯ ಚಟುವಟಿಕೆಯಿಂದ ಪ್ರತಿದಿನ ವಾಹನಗಳ ಸಂಚಾರ ದಟ್ಟಣೆ ಹೆಚ್ಚಳವಾಗಿದೆ.

ಸಾರ್ವಜನಿಕರು ಸಂಚಾರಕ್ಕೆ ಬಹುತೇಕ ಆಟೋ, ಕ್ರೂಷರ್ ಹಾಗೂ ಸ್ವಂತ ವಾಹನ ಬಳಸುತ್ತಾರೆ. ಪ್ರತಿದಿನ 22 ಕ್ರೂಷರ್, 60 ಆಟೋ, 18 ಲಗೇಜ್ ಸೇರಿದಂತೆ ಸುಮಾರು 130 ಸಾರಿಗೆ ಬಸ್ ಮತ್ತು 80ಕ್ಕೂ ಹೆಚ್ಚು ಕಲ್ಲುಗಣಿ ಸಾಗಣೆ ಲಾರಿಗಳು ಪಟ್ಟಣದಲ್ಲಿ ಸಂಚರಿಸುತ್ತಿವೆ.

ಅಪಾಯ ತಪ್ಪಿದ್ದಲ್ಲ: ಮುಷ್ಟಗಟ್ಟೆ ರಸ್ತೆಯಲ್ಲಿ ಗುಡ್ಡದ ತಿರುವಿನ ಇಳಿಜಾರಿನಲ್ಲಿ ದೊಡ್ಡ ಕೊರಕಲು ಅಪಾಯದ ಗಂಟೆ ಬಾರಿಸಿದೆ. ಚಾಲಕ ಕೊಂಚ ಎಚ್ಚರ ತಪ್ಪಿದರೆ ಭಾರಿ ಅನಾಹುತ ಎದುರಾಗುತ್ತದೆ. ಕಳೆದ ವರ್ಷ ಇದೇ ತಿರುವಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದಾರೆ. ಕಂಪ್ಲಿ, ಬಾದನಹಟ್ಟಿ, ಯರಂಗಳಿಗೆ, ಸಿರಿಗೇರಿ ರಸ್ತೆಗಳಲ್ಲಿ ಹೆಜ್ಜೆಹೆಜ್ಜೆಗೂ ದೊಡ್ಡ ಗಾತ್ರದ ಗುಂಡಿಗಳಿವೆ. ರಸ್ತೆ ಮೇಲಿನ ಡಾಂಬರ್ ಕಿತ್ತು ಹೋಗಿದೆ. ವಾಹನಗಳು ಚಲಿಸುವಾಗ ರಸ್ತೆಯ ಅಕ್ಕಪಕ್ಕದ ಪಾದಚಾರಿಗೆ ಕಲ್ಲುಗಳು ಸಿಡಿಯುತ್ತಿವೆ. ದ್ವಿಚಕ್ರ ವಾಹನ ಚಾಲಕರು ಗುಂಡಿಗಳಿದ್ದ ಬಳಿ ವಾಹನದಿಂದ ಇಳಿದು ತಳ್ಳಿಕೊಂಡು ಹೋಗುತ್ತಿದ್ದಾರೆ.

ಕೆಲವೊಮ್ಮ ಸಾರಿಗೆ ಬಸ್ ಗುಂಡಿಯಲ್ಲಿ ಸಿಲುಕಿಕೊಂಡು ಸಂಚಾರ ಸ್ಥಗಿತಗೊಂಡ ಘಟನೆಗಳು ಸಹ ಜರುಗಿವೆ. ರಸ್ತೆ ಸಂಪೂರ್ಣ ಹದಗೆಟ್ಟ ಪರಿಣಾಮ ವಾಹನ ವಾರದೊಳಗೆ ದುರಸ್ತಿಗೆ ಬರುತ್ತಿರುವ ಕಾರಣ ಮಾಲೀಕರು ಗ್ಯಾರೇಜ್‌ಗೆ ಅಲೆಯುವಂತಾಗಿದೆ. ರಸ್ತೆ ದುರಸ್ತಿ ಮಾಡುವಂತೆ ಸಾರ್ವಜನಿಕರು ಅನೇಕ ಬಾರಿ ಕ್ಷೇತ್ರದ ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಶಾಸಕರು ಭರವಸೆ ನೀಡಿದ್ದು ಏನು ಮಾಡಿಲ್ಲ.

ವರದಿ: ಪಂಪನಗೌಡ ಬಾದನಹಟ್ಟಿ - ಕನ್ನಡಪ್ರಭ