ಪರ್ಯಾಯದ ವೇಳೆ ಬಂದ ₹11.50 ಕೋಟಿ ಕೃಷ್ಣ  ಮಠಕ್ಕೆರಾಜಾಂಗಣ ಪುನರ್ ನಿರ್ಮಾಣಕೆಜಿಯಿಂದ ಪಿಜಿವರೆಗೆ ಕಾಲೇಜು:

ಉಡುಪಿ: ಭಕ್ತರ ಅನುಕೂಲಕ್ಕಾಗಿ ₹2 ಕೋಟಿ ವೆಚ್ಚದಲ್ಲಿ ಎರಡು ಛತ್ರ ನಿರ್ಮಾಣ ಎರಡು ವರ್ಷದ ಪರ್ಯಾಯಾವಧಿಯಲ್ಲಿ ಕೃಷ್ಣ ಮಠಕ್ಕೆ ಬಂದ ಆದಾಯ ₹4.50 ಕೋಟಿ ಮತ್ತು ಪರ್ಯಾಯಕ್ಕೆ ಮೊದಲು ಭಕ್ತರು ತಮಗೆ ಕಾಣಿಕೆಯಾಗಿ ಅರ್ಪಿಸಿದ ₹7 ಕೋಟಿ ಗಳನ್ನು ಕೃಷ್ಣಮಠದ ಅಭಿವೃದ್ಧಿಗೆ ವಿನಿಯೋಗಿಸಿದ್ದು, ಮುಂದಿನ ಜನವರಿ ತಿಂಗಳಲ್ಲಿ ಪರ್ಯಾಯವನ್ನು ಮುಗಿಸಿ ಬರಿಗೈಯಲ್ಲಿ ತೆರಳುವುದಕ್ಕೆ ಸಿದ್ಧರಿರುವುದಾಗಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸ್ವಾಮೀಜಿ, ₹4.50 ಕೋಟಿ ವೆಚ್ಚದಲ್ಲಿ ಕೃಷ್ಣಮಠದ ಒಳಾಂಗಣದ ಮಾಡು ದುರಸ್ತಿ ಗೊಳಿಸಿ, ಮರ ಮತ್ತು ತಾಮ್ರವನ್ನು ಹೊದಿಸಿದ್ದೇವೆ. ತಲಾ ₹2 ಕೋಟಿ ವೆಚ್ಚದಲ್ಲಿ 2 ಛತ್ರಗಳನ್ನು ನಿರ್ಮಿಸಲಾಗುತ್ತಿದೆ ಎಂದು ಸ್ವಾಮೀಜಿ ಹೇಳಿದರು.

ರಾಜಾಂಗಣ ಪುನರ್ ನಿರ್ಮಾಣ: ಈಗಿರುವ ರಾಜಾಂಗಣವು ತಮ್ಮ 4ನೇ ಪರ್ಯಾಯಾವಧಿಯಲ್ಲಿ ನಿರ್ಮಿಸಿದ್ದು, ಅದನ್ನು ಪುನರ್ನಿರ್ಮಿಸಲಾಗುತ್ತಿದೆ. ಈಗಿರುವ ರಾಜಾಂಗಣದ ಮೇಲೆ ಮಧ್ವಾಂಗಣವನ್ನು ನಿರ್ಮಿಸಲಾಗುತ್ತಿದೆ. ಅದನ್ನು ಸಂಪೂರ್ಣವಾಗಿ ಸ್ಟೀಲಿನಿಂದ ಸ್ಪೇಸ್ ಫ್ರೇಮ್ ಸ್ಟ್ರಕ್ಚರ್ ರೀತಿಯಲ್ಲಿ ನಿರ್ಮಿಸಲಾಗುತ್ತಿದೆ. ಇದರ ಒಟ್ಟು ವೆಚ್ಚ ₹3 ಕೋಟಿಗಳಾಗಲಿದೆ. ನವೀಕೃತ ರಾಜಾಂಗಣವು ಅಕ್ಟೋಬರ್ ತಿಂಗಳೊಳಗೆ ಪೂರ್ಣಗೊಂಡು ಉದ್ಘಾಟನೆಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.

ಕೆಜಿಯಿಂದ ಪಿಜಿವರೆಗೆ ಕಾಲೇಜು: ಉಡುಪಿಯಿಂದ ಹೊರಗೆ ಇರುವ ಪಾಜಕದಲ್ಲಿ ಧರ್ಮಸಂಸ್ಕೃತಿಯ ಜೊತೆಗೆ ಕೆ.ಜಿ.ಯಿಂದ ಪಿ.ಜಿ.ವರೆಗೆ ಆಧುನಿಕ ಶಿಕ್ಷಣ ನೀಡುವ ಶಿಕ್ಷಣ ಕೇಂದ್ರ ಸ್ಥಾಪಿಸಲಾಗಿದ್ದು, ಈಗಾಗಲೇ 3 ಮಹಡಿಯ ಪ್ರೌಢಶಾಲೆವರೆಗೆ ಕಟ್ಟಡ ಸಿದ್ಧವಾಗಿ ಶಾಲಾರಂಭವಾಗಿದೆ. ಇದಕ್ಕೆ ₹6.25 ಕೋಟಿ ಖರ್ಚಾಗಿದೆ. ಇನ್ನು ಕಾಲೇಜು ಕಟ್ಟಡಕ್ಕೆ ₹75 ಲಕ್ಷ ಬೇಕಾಗಿದೆ. ಈ ಒಟ್ಟು ₹2 ಕೋಟಿಗಳನ್ನು ಭಕ್ತರ ದೇಣಿಗೆಯಿಂದ ಸಂಗ್ರಹಿಸಲಾಗಿದೆ ಎಂದರು.