ಜೈಲಿನ ಬಗ್ಗೆ ಅನೇಕರಿಗೆ ಕುತೂಹಲ. ಆದರೆ, ಇನ್ನು ಕೈದಿಗಳಷ್ಟೇ ಅಲ್ಲ, ಸಾಮಾನ್ಯ ಜನರೂ ಒಂದು ದಿನದ ಮಟ್ಟಿಗೆ ಜೈಲಿನ ಕತ್ತಲೆ ಕೋಣೆಯ ಅನುಭವ, ಕೈದಿಗಳ ಸಮವಸ್ತ್ರ ಧರಿಸಿ ಜೈಲಿನ ಊಟವನ್ನೇ ಸೇವಿಸಬಹುದು! 

ತಿರುವನಂತಪುರಂ: ಜೈಲಿನ ಬಗ್ಗೆ ಅನೇಕರಿಗೆ ಕುತೂಹಲ. ಆದರೆ, ಇನ್ನು ಕೈದಿಗಳಷ್ಟೇ ಅಲ್ಲ, ಸಾಮಾನ್ಯ ಜನರೂ ಒಂದು ದಿನದ ಮಟ್ಟಿಗೆ ಜೈಲಿನ ಕತ್ತಲೆ ಕೋಣೆಯ ಅನುಭವ, ಕೈದಿಗಳ ಸಮವಸ್ತ್ರ ಧರಿಸಿ ಜೈಲಿನ ಊಟವನ್ನೇ ಸೇವಿಸಬಹುದು! ಹೌದು, ತೆಲಂಗಾಣದಲ್ಲಿ ವಸಾಹತು ಕಾಲದ ಜೈಲೊಂದರಲ್ಲಿ ಶುಲ್ಕ ಪಾವತಿಸಿದರೆ ಒಂದು ರಾತ್ರಿಯನ್ನು ಕಳೆಯಲು ಅವಕಾಶ ನೀಡುವ ಜೈಲು ಪ್ರವಾಸೋದ್ಯಮ ಶೀಘ್ರದಲ್ಲೇ ಕೇರಳದಲ್ಲೂ ಆರಂಭವಾಗಲಿದೆ. 

ಕೇರಳ ಬಂದೀಖಾನೆ ಇಲಾಖೆ ಈ ನಿಟ್ಟಿನಿಂದ ಕಾರ್ಯನಿರ್ವಹಿಸುತ್ತಿದ್ದು, ಸೆಂಟ್ರಲ್ ಜೈಲೊಂದರಲ್ಲಿ ಸಾಮಾನ್ಯ ಜನರು ಶುಲ್ಕ ಪಾವತಿಸಿ ಒಂದು ರಾತ್ರಿಯನ್ನು ಜೈಲಿನ ಕತ್ತಲ ಕೋಣೆಯಲ್ಲಿ ಕಳೆಯಲು ವೇದಿಕೆ ಕಲ್ಪಿಸಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ತ್ರಿಶ್ಶೂರ್ ಜಿಲ್ಲೆಯ ವಿಯ್ಯೂರ್ ಸೆಂಟ್ರಲ್ ಜೈಲಿನಲ್ಲಿ ಸ್ಥಾಪಿಸಲಾಗುತ್ತಿರುವ ವಿಶಿಷ್ಟ ಜೈಲು ಮ್ಯೂಸಿಯಂನ ಭಾಗವಾಗಿ ಜೈಲು ಪ್ರವಾಸೋದ್ಯಮ ಆರಂಭಿಸುವ
ಯೋಜನೆಯನ್ನು ಬಂದೀಖಾನೆ ರೂಪಿಸಿದೆ. 

ಒಂದು ವೇಳೆ ಈ ಪ್ರಸ್ತಾವನೆಗೆ ಸರ್ಕಾರದ ಅನುಮೋದನೆ ದೊರೆತರೆ ಜೈಲು ವಾಸದ ಅನುಭವ ಪಡೆಯಲು ಆಸಕ್ತಿ ಇರುವ ವ್ಯಕ್ತಿಗಳು 24 ಗಂಟೆಗಳನ್ನು ಜೈಲಿನ ಕೋಣೆಯಲ್ಲಿ ಕಳೆಯಬಹುದಾಗಿದೆ. ಅವರಿಗೆ ಜೈಲಿನಲ್ಲಿ ಸಿದ್ಧಪಡಿಸಿದ ಸಾಮಾನ್ಯ ಆಹಾರವನ್ನೇ ನೀಡಲಾಗುತ್ತದೆ.ಜೈಲು ಮ್ಯೂಸಿಯಂ ಯೋಜನೆಯ ಭಾಗವಾಗಿ ಈ ಕುರಿತ ವಿಸ್ತೃತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. 

ಜೈಲಿನ ಆವರಣದಲ್ಲೇ ಒಂದು ದಿನ ಕಳೆಯಲು ಜನರಿಗೆ ಅವಕಾಶ ನೀಡುವುದು ಈ ಪ್ರಸ್ತಾವನೆಯಲ್ಲಿ ಸೇರಿದೆ ಎಂದು ಬಂದೀಖಾನೆ ಡಿಜಿಪಿ ಆರ್.ಶ್ರೀಲೇಖಾ ಅವರು ತಿಳಿಸಿದ್ದಾರೆ. ತೆಲಂಗಾಣದಲ್ಲೂ ಇದೆ: ಜೈಲು ಪ್ರವಾಸೋದ್ಯಮ ಇದೇ ಮೊದಲಲ್ಲ. ತೆಲಂಗಾಣದಲ್ಲಿ 220 ವರ್ಷ ಹಳೆಯದಾದ ಸಂಗ್ರರೆಡ್ಡಿ ಜೈಲಿನಲ್ಲಿ ಪ್ರವಾಸಿಗರು ದಿನಕ್ಕೆ 500 ರು. ನೀಡಿದರೆ ಒಂದು ದಿನ ಜೈಲಿನಲ್ಲಿ ಕಳೆದು ಬ್ರಿಟೀಷರ ಕಾಲದಲ್ಲಿ ಜೈಲಿನಲ್ಲಿ ಕೈದಿಗಳನ್ನು ಹೇಗೆ ನಡೆಸಿಕೊಳ್ಳಲಾಗುತ್ತಿತ್ತು ಎಂಬುದನ್ನು ಸ್ವತಃ ತಿಳಿದುಕೊಳ್ಳಬಹುದಾಗಿದೆ.