ಆಸ್ಪತ್ರೆಗೆ ದಾಖಲಾದ ರೋಗಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ, ವೈದ್ಯರ ನಿರ್ಲಕ್ಷ್ಯ ಎಂದು ಆರೋಪಿಸಿದ ಮೃತರ ಸಂಬಂಧಿಕರ ತಂಡವೊಂದು ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿ, ದಾದಿ ಹಾಗೂ ಕರ್ತವ್ಯನಿರತ ವೈದ್ಯರಿಬ್ಬರಿಗೆ ಹಲ್ಲೆ ನಡೆಸಿ ಒಬ್ಬ ವೈದ್ಯರನ್ನೇ ಅಪಹರಿಸಿರುವ ಘಟನೆ ದೇರಳಕಟ್ಟೆಯ ಯೇನೆಪೋಯ ಆಸ್ಪತ್ರೆಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಘಟನೆಗೆ ಸಂಬಂಧಿಸಿ ಮೂವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ (ಮೇ.16): ಆಸ್ಪತ್ರೆಗೆ ದಾಖಲಾದ ರೋಗಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ, ವೈದ್ಯರ ನಿರ್ಲಕ್ಷ್ಯ ಎಂದು ಆರೋಪಿಸಿದ ಮೃತರ ಸಂಬಂಧಿಕರ ತಂಡವೊಂದು ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿ, ದಾದಿ ಹಾಗೂ ಕರ್ತವ್ಯನಿರತ ವೈದ್ಯರಿಬ್ಬರಿಗೆ ಹಲ್ಲೆ ನಡೆಸಿ ಒಬ್ಬ ವೈದ್ಯರನ್ನೇ ಅಪಹರಿಸಿರುವ ಘಟನೆ ದೇರಳಕಟ್ಟೆಯ ಯೇನೆಪೋಯ ಆಸ್ಪತ್ರೆಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಘಟನೆಗೆ ಸಂಬಂಧಿಸಿ ಮೂವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಕಿನ್ಯಾ ನಿವಾಸಿ ಬಾವು (65) ಎಂಬವರನ್ನು ಅಸೌಖ್ಯದ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ ವೇಳೆ ಸಂಬಂಧಿಕರು ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಗೆ ದಾಖಲಾಗಿದ್ದರು. ಹೃದಯ ಸಂಬಂಧಿ ಕಾಯಿಲೆ ಮತ್ತು ತೀವ್ರ ಮಧುಮೇಹದಿಂದ ಬಳಲುತ್ತಿದ್ದ ಬಾವು ಸ್ಥಿತಿ ಚಿಂತಾಜನಕವಾಗಿತ್ತು. ಈ ನಡುವೆ ಔಷಧಕ್ಕಾಗಿ ಹಣ ತರಲೆಂದು ಬಾವು ಅವರ ಪುತ್ರ ಮಹಮ್ಮದ್ ಆಸಿಫ್ ಮನೆ ಕಡೆಗೆ ತೆರಳಿದ್ದರು. ಅಲ್ಲಿಂದ ವಾಪಸ್ ಬರುವ ಸಂದರ್ಭ ಬಾವು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಇದರಿಂದ ಆಕ್ರೋಶಗೊಂಡ ಸಂಬಂಧಿಕರು, ಪರಿಚಿತರು ಆಸ್ಪತ್ರೆಗೆ ದಾಳಿ ನಡೆಸಿ ಕರ್ತವ್ಯ ನಿರತ ದಾದಿ ಫ್ರೋರೆನ್ಸ್ (50), ವೈದ್ಯರಾದ ಡಾ.ಶ್ರೀಕರ ರಾವ್, ಡಾ.ಅಭಿಜಿತ್ ಶೆಟ್ಟಿ ಮತ್ತು ಸೆಕ್ಯುರಿಟಿ ಸಿಬ್ಬಂದಿ ಗಣೇಶ್ ಎಂಬವರ ಮೇಲೆ ಹಲ್ಲೆ ನಡೆಸಿದೆ. ಆಸ್ಪತ್ರೆ ಕಂಪ್ಯೂಟರ್‌ಗಳಿಗೆ ಹಾನಿ ಮಾಡಿದೆ, ಕಿಟಕಿ ಗಾಜುಗಳನ್ನು ಪುಡಿಗೈದಿದೆ. ನಂತರ ವೈದ್ಯ ಡಾ.ಅಭಿಜಿತ್ ಶೆಟ್ಟಿ ಅವರನ್ನು ನಾಲ್ಕನೇ ಮಹಡಿಯಿಂದ ಎಳೆದು ತಂದು, ತಮ್ಮ ಏಸ್ ವಾಹನದಲ್ಲಿ ಠಾಣೆಗೆಂದು ಕೊಂಡೊಯ್ದಿದೆ. ಈ ವೇಳೆ ವಾಹನದಲ್ಲೂ ವೈದ್ಯರ ಮೇಲೆ ಹಲ್ಲೆ ನಡೆದಿದ್ದು, ಉಳ್ಳಾಲದ ಅಬ್ಬಕ್ಕ ವೃತ್ತ ತಲುಪುತ್ತಿದ್ದಂತೆ ಪೊಲೀಸರು ವಾಹನವನ್ನು ಅಡ್ಡಗಟ್ಟಿ, ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
