ನವದೆಹಲಿ[ಸೆ.13]: ರೈಲಿನಲ್ಲಿ ಮಣ್ಣಿನ ಕಪ್‌ನಲ್ಲಿ ಟೀ, ಕಾಫಿ ನೀಡುವ ವ್ಯವಸ್ಥೆ 15 ವರ್ಷಗಳ ಬಳಿಕ ಮರು ಜಾರಿಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಿಂದ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಶೀಘ್ರದಲ್ಲೇ ಚಹ, ತಿಂಡಿ ಹಾಗೂ ಊಟವನ್ನು ಮಣ್ಣಿನ ಕಪ್‌ ಹಾಗೂ ಮಣ್ಣಿನಲ್ಲಿ ಕರಗುವ ಪಾತ್ರೆಗಳಲ್ಲಿ ಒದಗಿಸಲು ನಿರ್ಧರಿಸಲಾಗಿದೆ. ದೇಶದ ಪ್ರಮುಖ 400 ರೈಲ್ವೆ ನಿಲ್ದಾಣಗಳಲ್ಲಿ ಮುಂಬರುವ ದಿನಗಳಲ್ಲಿ ಈ ಬದಲಾವಣೆ ನೋಡಲು ಸಿಗಲಿದೆ.

ಇನ್ನು ಏರ್‌ಪೋರ್ಟ್‌, ಮಾಲ್‌ಗಳಲ್ಲೂ ಮಣ್ಣಿನ ಕಪ್‌ನಲ್ಲಿ ಟೀ!

ಖಾದಿ ಹಾಗೂ ಗ್ರಾಮೀಣ ಕೈಗಾರಿಕೆಗಳ ಆಯೋಗದ ವತಿಯಿಂದ 30 ಸಾವಿರ ಇಲೆಕ್ಟ್ರಿಕ್‌ ಕುಂಬಾರ ಚಕ್ರಗಳನ್ನು ಹಾಗೂ ಮಣ್ಣು ಕಲಸುವ ಯಂತ್ರಗಳನ್ನು ಒದಗಿಸಲಾಗುವುದು. ಇದರಿಂದ ದಿನನಿತ್ಯ 2 ಕೋಟಿ ಮಣ್ಣಿನ ಕಪ್‌ಗಳು ಹಾಗೂ ಇತರ ಪಾತ್ರೆಗಗಳನ್ನು ತಯಾರಿಸಬಹುದಾಗಿದೆ ಎಂದು ಖಾದಿ ಕೈಗಾರಿಕೆಗಳ ಮುಖ್ಯಸ್ಥ ವಿನಯ್‌ ಸಕ್ಸೇನಾ ಹೇಳಿದ್ದಾರೆ.

ರೈಲ್ವೆ ಇಲಾಖೆ ಈಗಾಗಲೇ ವಲಯವಾರು ರೈಲ್ವೆ ವಿಭಾಗಗಳ ಮುಖ್ಯಸ್ಥರಿಗೆ ಸ್ಥಳೀಯವಾಗಿ ಉತ್ಪಾದನೆಯಾಗುವ ಪರಿಸರ ಸ್ನೇಹಿ ಉತ್ಪನ್ನಗಳಲ್ಲಿ ಆಹಾರ ಒದಗಿಸುವಂತೆ ಸೂಚನೆ ನೀಡಿದೆ. ಉತ್ತರ ಪ್ರದೇಶ ರಾಯ್‌ ಬರೇಲಿ ಮತ್ತು ವಾರಾಣಸಿ ರೈಲ್ವೆ ನಿಲ್ದಾಣಗಳಲ್ಲಿ ಮಣ್ಣಿನ ಕಪ್‌ಗಳು ಬಳಕೆಯಲ್ಲಿವೆ.

ಇನ್ನು ಏರ್‌ಪೋರ್ಟ್‌, ಮಾಲ್‌ಗಳಲ್ಲೂ ಮಣ್ಣಿನ ಕಪ್‌ನಲ್ಲಿ ಟೀ!

2004ರಲ್ಲಿ ಲಾಲು ಪ್ರಸಾದ್‌ ಯಾದವ್‌ ರೈಲ್ವೆ ಸಚಿವರಾಗಿದ್ದ ವೇಳೆ ರೈಲ್ವೆ ನಿಲ್ದಾಣಗಳಲ್ಲಿ ಮಣ್ಣಿನ ಕಪ್‌ನಲ್ಲಿ ಚಹ ಹಾಗೂ ಕಾಫಿ ನೀಡುವ ವ್ಯವಸ್ಥೆ ಜಾರಿಗೊಳಿಸಿದ್ದರು.