ಕೆಪಿಸಿಸಿ ಅಧ್ಯಕ್ಷ ಗಾದಿಗೆ ಕಾಂಗ್ರೆಸ್'ನಲ್ಲಿ ಲಾಬಿ ಜೋರಾಗಿದೆ. ಹಾಲಿ ಅಧ್ಯಕ್ಷ ಜಿ. ಪರಮೇಶ್ವರ್​ ಕೆಪಿಸಿಸಿ ಗಾದಿ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದರೆ, ಕೆ.ಹೆಚ್​. ಮುನಿಯಪ್ಪ ತಾನೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಂತ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. 7 ಬಾರಿ ಸಂಸದರಾಗಿ 10 ವರ್ಷ ಕೇಂದ್ರ ಸಚಿವರಾಗಿರೋ ಅನುಭವ ನನಗಿದೆ ಅಂತ ಅನ್ನೋ ಮೂಲಕ ಮುನಿಯಪ್ಪ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಬೆಂಗಳೂರು(ಮಾ.05): ಕೆಪಿಸಿಸಿ ಅಧ್ಯಕ್ಷ ಗಾದಿಗೆ ಕಾಂಗ್ರೆಸ್'ನಲ್ಲಿ ಲಾಬಿ ಜೋರಾಗಿದೆ. ಹಾಲಿ ಅಧ್ಯಕ್ಷ ಜಿ. ಪರಮೇಶ್ವರ್​ ಕೆಪಿಸಿಸಿ ಗಾದಿ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದರೆ, ಕೆ.ಹೆಚ್​. ಮುನಿಯಪ್ಪ ತಾನೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಂತ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. 7 ಬಾರಿ ಸಂಸದರಾಗಿ 10 ವರ್ಷ ಕೇಂದ್ರ ಸಚಿವರಾಗಿರೋ ಅನುಭವ ನನಗಿದೆ ಅಂತ ಅನ್ನೋ ಮೂಲಕ ಮುನಿಯಪ್ಪ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಇಷ್ಟೇ ಅಲ್ಲ, ಪರಮೇಶ್ವರ್ ವಿರುದ್ಧ ಗುಟುರು ಕೂಡ ಹಾಕಿದ್ದಾರೆ. ಎರಡು ಹುದ್ದೆ ನಿಭಾಯಿಸಲು ಪರಮೇಶ್ವರ್​ಗೆ ಕಷ್ಟ ಆಗುತ್ತಿದೆ. ಈಗಲಾದರೂ ಹೈಕಮಾಂಡ್ ಎಚ್ಚೆತ್ತು ಕೆಪಿಸಿಸಿ ಅಧ್ಯಕ್ಷರನ್ನ ಆಯ್ಕೆ ಮಾಡಲಿ ಅಂತ ಹೇಳಿದರು. ನಿನ್ನೆಯಷ್ಟೇ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್​, ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿಯಾಗಿ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯಲು ಸಹಕರಿಸುವಂತೆ ಮನವಿ ಮಾಡಿದ್ದರು. ಈ ವೇಳೆ ಮಾತನಾಡಿದ್ದ ಖರ್ಗೆ, ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಸಂಬಂಧ ಹೈಕಮಾಂಡ್ ಅಭಿಪ್ರಾಯ ಕೇಳಿ ತಿಳಿಸುವುದಾಗಿ ಹೇಳಿದ್ದರು.

ಹಾಲಿ ಇಂಧನ ಸಚಿವರಾಗಿರುವ ಡಿ.ಕೆ. ಶಿವಕುಮಾರ್​ ಕೂಡ ಕೆಪಿಸಿಸಿ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿದ್ದಾರೆ. ಸಿಎಂ ಸಿದ್ರಾಮಯ್ಯ ಆರಂಭದಿಂದಲೂ ಎಸ್​.ಆರ್. ಪಾಟೀಲ್ ಹೆಸರನ್ನೇ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಶಿಫಾರಸು ಮಾಡುತ್ತಾ ಬಂದಿದ್ದಾರೆ. ಆದರೆ ಹೈಕಮಾಂಡ್​ ಹಸಿರು ನಿಶಾನೆ ನೀಡಿಲ್ಲ. ಇವರೆಲ್ಲರ ನಡುವೆ ಮಲ್ಲಿಕಾರ್ಜುನ ಖರ್ಗೆಯವರೇ ಬ್ಲಾಕ್​ ಹಾರ್ಸ್​​ನಂತೆ ಕೆಪಿಸಿಸಿ ಅಧ್ಯಕ್ಷರಾಗಿ ಬಂದರೂ ಅಚ್ಚರಿ ಇಲ್ಲ ಎನ್ನುವ ಮಾತು ಕೂಡ ಕಾಂಗ್ರೆಸ್ ಪಡಸಾಲೆಯಲ್ಲಿ ಹರಿದಾಡುತ್ತಿದೆ.

ವರದಿ: ವೀರೇಂದ್ರ ಉಪ್ಪುಂದ, ಸುವರ್ಣನ್ಯೂಸ್​