ಆರು ತಿಂಗಳ ಹಿಂದೆ ಹರಿಯಾಣದ ಬಿಗಿ ಭದ್ರತೆಯುಳ್ಳ ಅಂಬಾಲ ಸೆಂಟ್ರಲ್ ಜೈಲಿನಿಂದ ತಪ್ಪಿಸಿಕೊಂಡು ಆತಂಕ ಸೃಷ್ಟಿಸಿದ್ದ ಪಂಜಾಬ್‌ನ ಕುಖ್ಯಾತ ಪಾತಕಿಯೊಬ್ಬ, ತನ್ನ ಪ್ರಿಯತಮೆ ಜತೆ ಮೈಸೂರಿಗೆ ‘ವಿಹಾರ’ ಹೋಗುವ ಯತ್ನದಲ್ಲಿದ್ದಾಗ ರೈಲ್ವೆ ನಿಲ್ದಾಣದಲ್ಲಿ ಖಾಕಿ ಬಲೆಗೆ ಬಿದ್ದಿದ್ದಾನೆ.
ಬೆಂಗಳೂರು (ಡಿ.28):ಆರು ತಿಂಗಳ ಹಿಂದೆ ಹರಿಯಾಣದ ಬಿಗಿ ಭದ್ರತೆಯುಳ್ಳ ಅಂಬಾಲ ಸೆಂಟ್ರಲ್ ಜೈಲಿನಿಂದ ತಪ್ಪಿಸಿಕೊಂಡು ಆತಂಕ ಸೃಷ್ಟಿಸಿದ್ದ ಪಂಜಾಬ್ನ ಕುಖ್ಯಾತ ಪಾತಕಿಯೊಬ್ಬ, ತನ್ನ ಪ್ರಿಯತಮೆ ಜತೆ ಮೈಸೂರಿಗೆ ‘ವಿಹಾರ’ ಹೋಗುವ ಯತ್ನದಲ್ಲಿದ್ದಾಗ ರೈಲ್ವೆ ನಿಲ್ದಾಣದಲ್ಲಿ ಖಾಕಿ ಬಲೆಗೆ ಬಿದ್ದಿದ್ದಾನೆ. ಪಂಜಾಬ್ನ ದೀಪಕ್ ಅಲಿಯಾಸ್ ಟೀನು ಬಂಧಿತ.
ಕೆಲವು ದಿನಗಳಿಂದ ಕರ್ನಾಟಕದಲ್ಲಿ ಟೀನು ಅವಿತುಕೊಂಡಿರುವ ಖಚಿತ ಮಾಹಿತಿ ಪಡೆದ ಹರಿಯಾಣ ಪೊಲೀಸರು, ಆತನ ಬಂಧನಕ್ಕೆ ಸಹಕಾರ ಕೋರಿ ಬೆಂಗಳೂರು ಪೊಲೀಸರನ್ನು ಸಂಪರ್ಕಿಸಿದ್ದರು. ನಂತರ ಕುಖ್ಯಾತ ಪಾತಕಿ ಟೀನು ಜಾಡು ಹಿಡಿದ ಸಿಸಿಬಿ ಇನ್ಸ್ಪೆಕ್ಟರ್ ರಾಜು ನೇತೃತ್ವದ ತಂಡವು, ಬುಧವಾರ ಬೆಳಗ್ಗೆ ಮೈಸೂರಿಗೆ ತೆರಳಲು ರೈಲ್ವೆ ನಿಲ್ದಾಣಕ್ಕೆ ಆರೋಪಿ ಬಂದಿರುವ ಖಚಿತ ಮಾಹಿತಿ ಪಡೆದು ನಡೆಸಿದ ಕಾರ್ಯಾಚರಣೆಯಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಟೋರಿಯಸ್ ಪಾತಕಿ: ಹಲವು ವರ್ಷಗಳ ಪಾತಕಲೋಕದಲ್ಲಿ ಪಂಜಾಬ್ ಮೂಲದ ಟೀನು ಸಕ್ರಿಯವಾಗಿದ್ದು, ಆತನ ವಿರುದ್ಧ ವಿವಿಧ ರಾಜ್ಯಗಳಲ್ಲಿ ದರೋಡೆ, ಕೊಲೆ, ಸುಲಿಗೆ ಸೇರಿದಂತೆ 28ಕ್ಕೂ ಅಧಿಕ ಅಪರಾಧ ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಪಂಜಾಬ್, ರಾಜಸ್ಥಾನ, ಹರಿಯಾಣ ಹಾಗೂ ದೆಹಲಿ ರಾಜ್ಯಗಳಲ್ಲಿ ಆತನೊಬ್ಬ ಮೋಸ್ಟ್ ವಾಟೆಂಡ್ ಕ್ರಿಮಿನಲ್ ಆಗಿದ್ದ.
ಕೆಲ ವರ್ಷಗಳ ಹಿಂದೆ ‘ಸ್ಟೂಡೆಂಟ್ ಆಫ್ ಪಂಜಾಬ್ ಯೂನಿವರ್ಸಿಟಿ (ಎಸ್ 'ಪಿಯು)’ಎಂಬ ಹೆಸರಿನಲ್ಲಿ ವಿದ್ಯಾರ್ಥಿ ಸಂಘಟನೆ ಕಟ್ಟಿದ್ದ ಟೀನು, ಆ ಸಂಘಟನೆಗೆ 100ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಸದಸ್ಯರಾಗಿ ಮಾಡಿದ್ದ. ನಂತರ ಆ ಸದಸ್ಯರ ಪೈಕಿ ಬಹುತೇಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿದ್ದ ಟೀನು, ಬಳಿಕ ಅಪರಾಧ ಕೃತ್ಯಗಳನ್ನು ಎಸಗಲು ಅವರನ್ನು ಬಳಸಿಕೊಳ್ಳುತ್ತಿದ್ದ. ಪಂಜಾಬ್-ಹರಿಯಾಣ ರಾಜ್ಯದ ಮತ್ತೊಬ್ಬ ಕುಖ್ಯಾತ ಪಾತಕಿ ಲಾರೆನ್ಸ್ ಬಿಸ್ನಾಯಿ ಎಂಬಾತ ಕೂಡ ಟೀನು ಸಹಚರನಾಗಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಕೆಲ ತಿಂಗಳ ಹಿಂದೆ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ಟೀನು ಬಂಧಿಸಿ ಹರಿಯಾಣ ಪೊಲೀಸರು ಅಂಬಾಲ ಸೆಂಟ್ರಲ್ ಜೈಲಿಗೆ ಕಳುಹಿಸಿದ್ದರು. ಇದೇ ವರ್ಷದ ಜೂನ್ನಲ್ಲಿ ಕಾರಾಗೃಹದ ಅಭೇದ್ಯ ಭದ್ರತಾ ಕೋಟೆಯಿಂದ ತಪ್ಪಿಸಿಕೊಂಡು ಹೊರಬಂದ ಟೀನು, ಅಲ್ಲಿಂದ ದೆಹಲಿ ಸೇರಿ ಮತ್ತಿತರೆಡೆ ಆಶ್ರಯ ಪಡೆದಿದ್ದ. ಹೀಗೆ ನವೆಂಬರ್ನಲ್ಲಿ ಆತನ ಅಡುಗುದಾಣದ ಬಗ್ಗೆ ಮಾಹಿತಿ ಪಡೆದು ದೆಹಲಿ ಪೊಲೀಸರು ಬಂಧನಕ್ಕೆ ಮುಂದಾಗಿದ್ದರು.
ಆಗ ಪೊಲೀಸರ ಜತೆ ಗುಂಡಿನ ಚಕಮಕಿ ನಡೆಸಿ ಅವನು ತಪ್ಪಿಸಿಕೊಂಡಿದ್ದ. ಈ ಕಾದಾಟದಲ್ಲಿ ಟೀನುಗೆ ಗುಂಡೇಟು ಬಿದ್ದಿತ್ತು ಎನ್ನಲಾಗಿದೆ. ಹರಿಯಾಣ ಟು ಹುಬ್ಬಳ್ಳಿ: ದೆಹಲಿಯಲ್ಲಿ ಪೊಲೀಸರಿಂದ ಸಿನಿಮೀಯ ಶೈಲಿಯಲ್ಲಿ ತಪ್ಪಿಸಿಕೊಂಡ ಟೀನು, ತನ್ನ ಜೀವ ಉಳಿಸಿಕೊಳ್ಳಲು ಹುಬ್ಬಳ್ಳಿಯಲ್ಲಿ ಆಶ್ರಯ ಪಡೆದಿದ್ದ, ಎರಡು ವಾರದ ಹಿಂದೆ ಹುಬ್ಬಳ್ಳಿಗೆ ಬಂದ ಆತನಿಗೆ ಹುಬ್ಬಳ್ಳಿಯಲ್ಲಿ ನೆಲೆಸಿರುವ ಪಂಜಾಬ್ ಮೂಲದ ದರ್ಶನ್ ಎಂಬಾತನ ನೆರವು ಸಿಕ್ಕಿತು. ಈ ಹಿಂದೆ ಟೀನು ಸಾರಥ್ಯದ ಎಸ್ಪಿಯು ವಿದ್ಯಾರ್ಥಿ ಸಂಘಟನೆ ಸದಸ್ಯನಾಗಿದ್ದ ದರ್ಶನ್, ಹಳೆಯ ಗೆಳೆತನ ಹಿನ್ನೆಲೆಯಲ್ಲಿ ತನ್ನ ನಾಯಕನಿಗೆ ಸಹಾಯ ಮಾಡಿ ಈಗ ಜೈಲು ಸೇರುವಂತಾಯಿತು ಎಂದು ಸಿಸಿಬಿ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಹತ್ತು ದಿನ ಹುಬ್ಬಳ್ಳಿಯಲ್ಲಿದ್ದ ಟೀನನನ್ನು ವೈದ್ಯಕೀಯ ಚಿಕಿತ್ಸೆ ಸಲುವಾಗಿ ದರ್ಶನ್, ಮೂರು ದಿನಗಳ ಹಿಂದೆ ಮೈಸೂರಿಗೆ ಕರೆತಂದಿದ್ದ. ಈ ವೇಳೆ ಸಾಂಸ್ಕೃತಿಕ ನಗರಿ ಸುತ್ತಾಡಿದ ಟೀನು, ಆ ನಗರದ ವೈಭವ ಕಂಡು ಮನಸೋತ. ಬಳಿಕ ತನ್ನ ಪ್ರಿಯತಮೆಗೂ ಮೈಸೂರು ತೋರಿಸುವ ಇಚ್ಛಿಸಿದ ಆತ, ಹರಿಯಾಣದಲ್ಲಿದ್ದ ಪ್ರಿಯತಮೆಯನ್ನು ಸಂಪರ್ಕಿಸಿ ಬೆಂಗಳೂರಿಗೆ ಬರುವಂತೆ ಸೂಚಿಸಿದ್ದ.
ಈ ಕರೆ ಹಿನ್ನೆಲೆಯಲ್ಲಿ ಮಂಗಳವಾರ ಬೆಂಗಳೂರಿಗೆ ಬಂದಿಳಿದ ಆಕೆಯನ್ನು ಟೀನು, ಬುಧವಾರ ಮೈಸೂರಿಗೆ ಕರೆಯುವ ಯತ್ನದಲ್ಲಿದ್ದಾಗ ಸಿಸಿಬಿ ಬಲೆಗೆ ಬಿದ್ದಿದ್ದಾನೆ. ಬೆಂಗಳೂರಿನಲ್ಲಿ ಟೀನು ಆಶ್ರಯ ಪಡೆದಿರುವ ಖಚಿತ ಮಾಹಿತಿ ಪಡೆದ ಹರಿಯಾಣದ ತನಿಖಾಧಿಕಾರಿ ರವೀಂದ್ರರ್ ಕುಮಾರ್ ನೇತೃತ್ವದ ತಂಡವು, ನಗರದ ಪೊಲೀಸರನ್ನು ಸಂಪರ್ಕಿಸಿತು.
ಈ ವಿಷಯ ತಿಳಿದ ಸಿಸಿಬಿ ಅಧಿಕಾರಿಗಳು, ಟೀನು ಬೆನ್ನು ಹತ್ತಿದ್ದಾಗ ಕಾಟನ್ಪೇಟೆಯ ಲಾಡ್ಜ್ನಲ್ಲಿ ತನ್ನ ಗೆಳತಿ ಜತೆ ಅವನು ತಂಗಿರುವ ಸುಳಿವು ಸಿಕ್ಕಿತು. ಕೂಡಲೇ ಜಾಗ್ರತರಾದ ಸಿಸಿಬಿ ತಂಡವು, ರೈಲ್ವೆ ನಿಲ್ದಾಣ ಬಳಿ ಟೀನುನನ್ನು ಬಂಧಿಸಿ ಬಳಿಕ ಹರಿಯಾಣ ಪೊಲೀಸರ ವಶಕ್ಕೊಪ್ಪಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
