Asianet Suvarna News Asianet Suvarna News

ಬೆಂಗಳೂರಿಗೆ 400 ಕಿ.ಮೀ ದೂರದ ಲಿಂಗನಮಕ್ಕಿ ನೀರು..?

ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ಪೂರೈಸುವ ಸಲುವಾಗಿ ರೂಪುಗೊಳ್ಳುತ್ತಿರುವ ‘ಕಾಗದದ ಮೇಲಿನ ಯೋಜನೆ’ಯೊಂದು ಇದೀಗ ಮಲೆನಾಡಿನಲ್ಲಿ ಕಿಚ್ಚು ಹತ್ತಿಸಿದೆ. 

Panel suggests drawing water for Bangalore from Linganamakki

ಗೋಪಾಲ್‌ ಯಡಗೆರೆ

 ಶಿವಮೊಗ್ಗ :  ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ಪೂರೈಸುವ ಸಲುವಾಗಿ ರೂಪುಗೊಳ್ಳುತ್ತಿರುವ ‘ಕಾಗದದ ಮೇಲಿನ ಯೋಜನೆ’ಯೊಂದು ಇದೀಗ ಮಲೆನಾಡಿನಲ್ಲಿ ಕಿಚ್ಚು ಹತ್ತಿಸಿದೆ. ಭವಿಷ್ಯದ ಬೆಂಗಳೂರಿನ ಕುಡಿಯುವ ನೀರಿನ ಬವಣೆ ನೀಗಿಸಲು ಸಾಗರ ತಾಲೂಕಿನ ಲಿಂಗನಮಕ್ಕಿಯಿಂದ 400 ಕಿ.ಮೀ. ದೂರದ ಬೆಂಗಳೂರಿಗೆ ಪೈಪ್‌ಲೈನ್‌ ಮೂಲಕ ನೀರು ಸಾಗಿಸುವ ಯೋಜನೆ ಕುರಿತು ಸರ್ಕಾರದ ಮಟ್ಟದಲ್ಲಿ ಚಟುವಟಿಕೆ ಆರಂಭಗೊಂಡಿದೆ. ಇತ್ತೀಚೆಗೆ ಅಧಿಕಾರಿಗಳ ಸಭೆಯಲ್ಲಿ ಡಾ.ಜಿ.ಪರಮೇಶ್ವರ್‌ ಅವರು ಈ ಯೋಜನೆ ಸಂಬಂಧ ಡಿಪಿಆರ್‌ ಸಿದ್ಧಪಡಿಸುವಂತೆ ಹೇಳಿರುವುದು ಮಲೆನಾಡಿನ ಪರಿಸರದಲ್ಲಿ ಆತಂಕಕ್ಕೆ ಕಾರಣವಾಗಿದೆ.

2021ರಿಂದ 2050ವರೆಗಿನ ಬೆಂಗಳೂರಿನ ಕುಡಿಯುವ ನೀರಿನ ಬೇಡಿಕೆಯನ್ನು ಆಧಾರವಾಗಿಟ್ಟುಕೊಂಡು ಲಿಂಗನಮಕ್ಕಿಯಿಂದ ನೀರು ಪೂರೈಸುವ ಯೋಜನೆ ರೂಪಿಸಲಾಗುತ್ತಿದೆ. ಮೊದಲ ಹಂತದಲ್ಲಿ ಸುಮಾರು 10 ಟಿಎಂಸಿ ನೀರನ್ನು ಮತ್ತು ನಂತರದ ದಶಕದಲ್ಲಿ ಉಳಿದ 20 ಟಿಎಂಸಿ ನೀರನ್ನು ಸರಬರಾಜು ಮಾಡಬಹುದಾಗಿದೆ. ಇದಲ್ಲದೆ, ಹೆಚ್ಚುವರಿಯಾಗಿ ಇನ್ನೂ 30 ಟಿಎಂಸಿ ನೀರನ್ನು ಒಯ್ದಲ್ಲಿ ಬೆಂಗಳೂರು ಮಾತ್ರವಲ್ಲದೆ, ಕೋಲಾರ ಸೇರಿದಂತೆ ನೆರೆಯ ಬರಪೀಡಿತ ಜಿಲ್ಲೆಗಳ ಕುಡಿಯುವ ನೀರಿನ ಬವಣೆಯನ್ನು ಕೂಡ ಬಗೆಹರಿಸಬಹುದಾಗಿದೆ ಎಂದು ಈ ಯೋಜನೆ ಮೂಲಕ ಬಿಂಬಿಸಲಾಗುತ್ತಿದೆ.

ಅವಾಸ್ತವಿಕ, ದುಸ್ಸಾಸ- ತಜ್ಞರು?:  ಆದರೆ ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ಪೂರೈಸುವ ಯೋಜನೆಯೇ ಅವಾಸ್ತವಿಕ ಎನ್ನುತ್ತಾರೆ ತಜ್ಞರು. ಸಮುದ್ರಮಟ್ಟದಿಂದ 1800 ಅಡಿ ಎತ್ತರ ಇರುವ ಲಿಂಗನಮಕ್ಕಿಯಿಂದ ಸಮುದ್ರ ಮಟ್ಟದಿಂದ 2800 ಅಡಿ ಎತ್ತರ ಇರುವ ಬೆಂಗಳೂರಿಗೆ ನೀರು ಸಾಗಿಸುವುದು ದುಸ್ಸಾಹದ ಮಾತು. ಇದೊಂದು ಅರ್ಥಹೀನ ಮತ್ತು ಅಸಾಧ್ಯ ಎನ್ನುತ್ತಾರೆ ಯೋಜನೆ ವಿರೋಧಿ ಹೋರಾಟಗಾರರು.

ಲಿಂಗನಮಕ್ಕಿ ಜಲಾಶಯದಿಂದ ಶೇ.30ರಷ್ಟುನೀರನ್ನು ತೆಗೆಯುವುದು ಎಂದರೆ ವಿದ್ಯುತ್‌ ಉತ್ಪಾದನೆಯಲ್ಲಿ ಶೇ.30ರಷ್ಟುಖೋತಾ ಎಂದೇ ಅರ್ಥ. ಲಿಂಗನಮಕ್ಕಿಯಿಂದ ಬೆಂಗಳೂರಿಗೆ 400 ಕಿ.ಮೀ. ದೂರ ಮತ್ತು 1000 ಅಡಿ ಎತ್ತರಕ್ಕೆ ನೀರನ್ನು ಸಾಗಿಸಬೇಕೆಂದರೆ ಅದನ್ನು ಪಂಪ್‌ ಮಾಡಲು 375 ಮೆ.ವ್ಯಾ. ವಿದ್ಯುತ್‌ ಬೇಕಾಗುತ್ತದೆ. ಅಲ್ಲಿಗೆ ಸರಾಸರಿ 750 ಮೆ.ವ್ಯಾ. ವಿದ್ಯುತ್‌ ಖೋತಾ ಆಗುತ್ತದೆ. ಅಷ್ಟೇ ಅಲ್ಲ, ಪಶ್ಚಿಮಘಟ್ಟದ ದಟ್ಟಕಾಡುಗಳಲ್ಲಿ ಈ ಯೋಜನೆ ಜಾರಿಯಾಗಬೇಕಾಗುತ್ತದೆ. ಅದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಅರಣ್ಯ ನಾಶವಾಗುತ್ತದೆ. ಒಂದು ಪಕ್ಷ ಯೋಜನೆ ಜಾರಿಗೊಳಿಸಲು ಮುಂದಾದರೆ ಅದು ಇಲ್ಲಿನ ಜನ ಜೀವನದ ಮೇಲೆ, ಪ್ರಕೃತಿಯ ಮೇಲೆ, ಭವಿಷ್ಯತ್ತಿನ ಪೀಳಿಗೆಯ ಮೇಲೆ ಉಂಟು ಮಾಡಬಹುದಾದ ಪರಿಣಾಮಗಳ ಕುರಿತು ಇಲ್ಲಿನ ಜನರಲ್ಲಿ ಹೆದರಿಕೆ ಮೂಡಿದೆ. ಇದೇ ಕಾರಣಕ್ಕೆ ಮಲೆನಾಡಿನಲ್ಲಿ ಪ್ರತಿಭಟನೆ ಆರಂಭಗೊಂಡಿದೆ.

ಎಲ್ಲಿಂದ ಬಂದಿತು ಈ ಪ್ರಸ್ತಾಪ?:  ಬೆಂಗಳೂರು ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ ಮಾಜಿ ಅಧ್ಯಕ್ಷ ಬಿ.ಎನ್‌.ತ್ಯಾಗರಾಜ್‌ ನೇತೃತ್ವದ ಹತ್ತು ಜನರ ಸಮಿತಿಯೊಂದನ್ನು ಸರ್ಕಾರ ರಚಿಸಿತ್ತು. ಈ ಸಮಿತಿ ಇತ್ತೀಚೆಗಷ್ಟೇ ಸರ್ಕಾರಕ್ಕೆ ವರದಿಯೊಂದನ್ನು ಸಲ್ಲಿಸಿದೆ. ಈ ವರದಿಯಲ್ಲಿ ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರು ನಗರಕ್ಕೆ ನೀರು ತರಬಹುದು. ಇದರಿಂದ ಬೆಂಗಳೂರಿನ ನೀರಿನ ಬವಣೆ ಬಗೆಹರಿಸಬಹುದಾಗಿದೆ ಎಂದು ಹೇಳಿದೆ.

ಸಮಿತಿ ಹೇಳಿರುವುದೇನು?:  ಲಿಂಗನಮಕ್ಕಿ ಜಲಾಶಯದ ನೀರು ಶುದ್ಧವಾಗಿದ್ದನ್ನು ಸಹ ಸಮಿತಿ ಗಮನಿಸಿದೆ. ಜಲಾಶಯದ ನೀರನ್ನು ವಿದ್ಯುತ್‌ ಉತ್ಪಾದನೆಯಿಂದ ಸ್ವಲ್ಪ ವಿಮುಕ್ತಿಗೊಳಿಸಿದರೆ, ಮುಂದಿನ ದಿನಗಳಲ್ಲಿ 60 ಟಿಎಂಸಿ ನೀರನ್ನು ಬೆಂಗಳೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಗಳಿಗೆ ಪೂರೈಸಬಹುದಾಗಿದೆ. ಇಷ್ಟಾಗಿಯೂ ಶೇ.60ರಷ್ಟುನೀರು ಜಲಾಶಯದಲ್ಲಿ ಉಳಿಯುತ್ತದೆ. ಇದರಿಂದ ವಿದ್ಯುತ್‌ ಉತ್ಪಾದನೆ ಮಾಡಬಹುದಾಗಿದೆ ಎಂದು ಸಮಿತಿ ವರದಿಯಲ್ಲಿ ಹೇಳಿದೆ. ಇಷ್ಟುಮಾಡಿದರೆ ಮುಂದಿನ 2050ನೇ ಇಸವಿಯವರೆಗೂ ಬೆಂಗಳೂರು ಭಾಗದ ಕುಡಿಯುವ ನೀರಿನ ಬವಣೆ ನೀಗಿಸಬಹುದಾಗಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಿದೆ.

ನೀರು ಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರ ಯೋಚಿಸುತ್ತಿರುವ ಯೋಜನೆ ಇದಲ್ಲ. ಅಪಾರ ಪ್ರಮಾಣದ ಹಣವೇ ಈ ಯೋಜನೆಗೆ ಕಾರಣ. ಯಾವುದೇ ಕಾರಣಕ್ಕೂ ಸಾಧುವಲ್ಲದ, ಸಾಧ್ಯವೂ ಅಲ್ಲದ ಯೋಜನೆ ಇದಾಗಿದೆ. ಈ ಉದ್ದೇಶಿತ ಯೋಜನೆಯಲ್ಲಿ ಅಪಾರ ಪ್ರಮಾಣದ ಪರಿಸರ ನಾಶವಾಗುತ್ತದೆ. ಇದನ್ನು ಯಾರೂ ಒಪ್ಪಲು ಸಾಧ್ಯವೇ ಇಲ್ಲ.

-ಅಖಿಲೇಶ್‌ ಚಿಪ್ಳಿ, ಪರಿಸರ ಹೋರಾಟಗಾರ, ಸಾಗರ

ಯಾವುದೇ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಾಕ್ಷಣ ಈ ರೀತಿಯ ದೊಡ್ಡ ದೊಡ್ಡ ಯೋಜನೆಗಳು ಪ್ರಸ್ತಾವನೆಗೊಳ್ಳುತ್ತವೆ. ಈ ಯೋಜನೆ ಸಿದ್ಧಪಡಿಸಲು ಕೋಟ್ಯಂತರ ರುಪಾಯಿ ಖರ್ಚಾಗುತ್ತದೆ. ಇಂತಹ ಯೋಜನೆಗಳಿಂದ ಇಡೀ ಪಶ್ಚಿಮಘಟ್ಟದ ಮೇಲೆ ಆಗುವ ಪರಿಣಾಮವನ್ನು ಊಹಿಸಲೂ ಸಾಧ್ಯವಿಲ್ಲ. ಇದನ್ನು ಜಾರಿಗೊಳಿಸಲು ಮುಂದಾದರೆ ಗಂಭೀರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ.

- ಶಿವಮೊಗ್ಗ ನಂದನ್‌, ರಾಜ್ಯ ಸಂಚಾಲಕ, ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ಶಿವಮೊಗ್ಗ

Follow Us:
Download App:
  • android
  • ios