ಪಾಕಿಸ್ತಾನ ಸಂಸತ್‌ನ ಮೇಲ್ಮನೆಯ ಸದಸ್ಯರಾಗಿ ಆಯ್ಕೆಯಾದ ಹಿಂದೂ ಸಮುದಾಯದ ದಲಿತ ನಾಯಕಿ ಕೃಷ್ಣಾಕುಮಾರಿ ಕೊಲ್ಹಿ ಅವರು ಪ್ರತೀಜ್ಞಾ ವಿಧಿ ಸ್ವೀಕರಿಸಿದ್ದು, ಕಾರ್ಯಕ್ರಮಕ್ಕೆ ಭಾರತೀಯ ಸಂಪ್ರದಾಯ ಉಡುಗೆಯಲ್ಲಿ ಹೋಗಿದ್ದು ವಿಶೇಷವಾಗಿತ್ತು.
ಹೊಸದಿಲ್ಲಿ: ಪಾಕಿಸ್ತಾನ ಸಂಸತ್ನ ಮೇಲ್ಮನೆಯ ಸದಸ್ಯರಾಗಿ ಆಯ್ಕೆಯಾದ ಹಿಂದೂ ಸಮುದಾಯದ ದಲಿತ ನಾಯಕಿ ಕೃಷ್ಣಾಕುಮಾರಿ ಕೊಲ್ಹಿ ಅವರು ಪ್ರತೀಜ್ಞಾ ವಿಧಿ ಸ್ವೀಕರಿಸಿದ್ದು, ಕಾರ್ಯಕ್ರಮಕ್ಕೆ ಭಾರತೀಯ ಸಂಪ್ರದಾಯ ಉಡುಗೆಯಲ್ಲಿ ಹೋಗಿದ್ದು ವಿಶೇಷವಾಗಿತ್ತು.
ಭಾತೀಯ ಸಂಪ್ರದಾಯದೊಂದಿಗೆ ಅನಹ್ಯ ಸಂಬಂಧವಿರುವುದನ್ನು ತೋರಿಸುವಂತೆ, ಕೃಷ್ಣಾ ಅವರು ನೇರಳೆ ಬಣ್ಣದ ಥಾರಿ ಉಡುಗೆ ತೊಟ್ಟು, ಬಿಳಿ ಬಣ್ಣದ ಬಳೆ ಧರಿಸಿದ್ದರು. ಈ ಕಾರ್ಯಕ್ರಮದಲ್ಲಿ ಕೃಷ್ಣಾ ಪೋಷಕರೂ ಪಾಲ್ಗೊಂಡಿದ್ದು, ಮಗಳನ್ನು ಚಪ್ಪಾಳೆ ತಟ್ಟುವ ಮೂಲಕ ಹೆಮ್ಮೆಯಿಂದ ಪ್ರೋತ್ಸಾಹಿಸಿದರು.
ಕೃಷ್ಣಾ ಅವರನ್ನು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಲ್ಪ ಸಂಖ್ಯಾತರ ಕೋಟಾದಡಿ ಟಿಕೆಟ್ ನೀಡಿ ಮೇಲ್ಮನೆಗೆ ಆಯ್ಕೆ ಮಾಡಿದೆ. ಪಾಕ್ ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಕೃಷ್ಣಾ ಆಯ್ಕೆ ಪ್ರಮುಖ ಮೈಲುಗಲ್ಲಾಗಲಿದೆ ಎಂದೇ ಬಣ್ಣಿಸಲಾಗು ತ್ತಿದೆ.
ಸಿಂಧ್ ಪ್ರಾಂತ್ಯದ ಥಾರ್ ಪ್ರದೇಶಕ್ಕೆ ಸೇರಿದ ಕೃಷ್ಣಾ 16ನೇ ವಯಸ್ಸಿನಲ್ಲಿಯೇ ವಿವಾಹವಾದರೂ, ಬಳಿಕ ವಿದ್ಯಾಭ್ಯಾಸ ಮುಂದುವರೆಸಿ, 2013ರಲ್ಲಿ ಪದವಿ ಪಡೆದಿದ್ದಾರೆ. ನಂತರ ಪಿಪಿಪಿ ಜೊತೆ ಸೇರಿ ಹಲವು ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡರು.
