ಇಸ್ಲಾಮಾಬಾದ್(ಜೂ.26): ಪಾಕಿಸ್ತಾನ ಉಗ್ರರ ಸ್ವರ್ಗ, ಪಾಕ್ ಉಗ್ರವಾದಕ್ಕೆ ಪೋಷಣೆ ನೀಡುತ್ತಿದೆ ಎಂದು ಭಾರತ ವಿಶ್ವ ವೇದಿಕೆಯಲ್ಲಿ ಗಟ್ಟಿ ಧ್ವನಿಯಲ್ಲಿ ಅರಚುತ್ತಲೇ ಇದೆ.

ಇದನ್ನು ಕೇಳಿಯೂ ಕೇಳಿಸಿಕೊಳ್ಳದಂತಿದ್ದ ಜಾಗತಿಕ ಸಮುದಾಯ ಇದೀಗ ಭಾರತದ ಮಾತಿಗೆ ಧ್ವನಿಗೂಡಿಸುತ್ತಿದೆ. ಉಗ್ರವಾದಕ್ಕೆ ಪೋಷಣೆ ನೀಡದಂತೆ ಪಾಕ್ ಮೇಲೆ ಒತ್ತಡ ಹೇರುತ್ತಲೇ ಇದೆ.

ಆದರೆ ಪಾಕ್ ಮಾತ್ರ ತಾನು ಕೂಡ ಭಯೋತ್ಪಾದನೆಯಿಂದ ನರಳುತ್ತಿದ್ದು, ತನ್ನ ನೆಲದಲ್ಲಿ ಉಗ್ರವಾದಕ್ಕೆ ಸ್ಥಾನವಿಲ್ಲ ಎಂದು ತನ್ನ ನಕಲಿ ನಾಟಕ ಮುಂದುವರೆಸಿದೆ.

ಆದರೆ ಪಾಕ್’ನ ಈ ನಾಟಕವನ್ನು ಪಾಕ್ ಸೇನೆಯ ಯೋಧನೋರ್ವನೇ ಬಯಲಿಗೆಳೆದಿದ್ದಾನೆ. ಪಾಕ್ ಸೇನೆ ಉಗ್ರವಾದಿಗಳೊಂದಿಗೆ ಶಾಮೀಲಾಗಿ ಭಾರತದ ಮೇಲೆ ಜಿಹಾದ್ ನಡೆಸುತ್ತಿದೆ ಎಂದು ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಈ ಯೋಧ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ.

ಪಾಕ್ ಸೇನೆಯಲ್ಲಿ ಯೋಧನಾಗಿದ್ದ ರಾಣಾ ಜಾವೇದ್, ಪಾಕ್ ಸೇನೆ ಭಯೋತ್ಪಾದಕರಿಗೆ ತರಬೇತಿ ನೀಡುತ್ತಿರುವುದು ಸತ್ಯ ಎಂದು ಹೇಳಿದ್ದಾನೆ. ಅಲ್ಲದೇ ಬಾಲಾಕೋಟ್’ನಲ್ಲಿ ಜೈಶ್-ಎ-ಮೊಹ್ಮದ್ ಉಗ್ರ ಸಂಘಟನೆಯ ನೆಲೆ ಇರುವುದಾಗಿ ತಿಳಿಸಿದ್ದಾನೆ.

ತಾನು ಸ್ವಂತ ಕುಟುಂಬ ತ್ಯಜಿಸಿ ಪಾಕಿಸ್ತಾನಕ್ಕಾಗಿ, ಜಿಹಾದ್’ಗಾಗಿ ತನ್ನ ಜೀವನ ಸಮರ್ಪಿಸಿದ್ದೆ. ಆದರೆ ಪಾಕ್ ಸೇನೆಯ ಅಸಲಿ ಚಹರೆ ಕಂಡು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಫೇಸ್’ಬುಕ್ ಲೈವ್’ನಲ್ಲಿ ತಿಳಿಸಿ ರಾಣಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.