ಇಲ್ಲ, ಇನ್ನು ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸುವುದಿಲ್ಲ. ಭಾರತ-ಪಾಕಿಸ್ತಾನ ಗಡಿ ಭಾಗದಲ್ಲಿರುವ ಜನರು ಶಾಂತಿ ಮತ್ತು ನೆಮ್ಮದಿಯಿಂದ ಬದುಕುವಂತೆ ಮಾಡಲು ಸಕಲ ನೆರವು ನೀಡುವುದಾಗಿ ಮತ್ತೊಂದು ಒಪ್ಪಂದ ಮಾಡಿಕೊಂಡಿದ್ದ ಪಾಕಿಸ್ತಾನ ಮತ್ತೆ ತನ್ನ ಕುಹಕ ಬುದ್ಧಿಯನ್ನು ಮುಂದುವರಿಸಿದ್ದು, ಮತ್ತಿಬ್ಬರು ಯೋಧರ ಸಾವಿಗೆ ಕಾರಣವಾಗಿದೆ.
ಶ್ರೀನಗರ: ತನ್ನ ಕುಹಕ ಬುದ್ಧಿಯನ್ನು ಮುಂದುವರಿಸಿರುವ ಪಾಕಿಸ್ತಾನ ಮತ್ತೆ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದ್ದು, ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿ ಮತ್ತಿಬ್ಬರು ಭಾರತೀಯ ಯೋಧರನ್ನು ಹತ್ಯೆ ಮಾಡಿದೆ. ಶನಿವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದ ಅಕ್ನೂರ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ.
ಗಡಿ ಭಾಗದಲ್ಲಿರುವ ಜನರು ನೆಮ್ಮದಿ ಮತ್ತು ಶಾಂತಿಯಿಂದ ಬದುಕುವಂತೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಕ್ರಮ ಕೈಗೊಳ್ಳಲು ಉಭಯ ದೇಶಗಳು ಪರಸ್ಪರ ಒಪ್ಪಂದ ಮಾಡಿಕೊಂಡ ಎರಡು ದಿನಗಳಲ್ಲಿಯೇ ಪಾಕಿಸ್ತಾನ ಮತ್ತೆ ಇಂಥ ದುಷ್ಕೃತ್ಯವೆಸಗಿದೆ.
ಭಾರತ ಹಾಗೂ ಪಾಕಿಸ್ತಾನದ ಸೈನ್ಯ ಕಾರ್ಯಾಚರಣೆ ಮಹಾ ನಿರ್ದೇಶಕರು ವಿಶೇಷ ಒಪ್ಪಂದಕ್ಕೆ ಸಹಿ ಮಾಡಿದ್ದು, ಗಡಿ ಭಾಗದ ಪರಿಸ್ಥಿತಿಯನ್ನು ಸುಧಾರಿಸಲು ಮುಂದಾಗಿದ್ದರು. 2003ರ ಕದನ ವಿರಾಮ ಒಪ್ಪಂದಕ್ಕೆ ಬದ್ಧರಾಗಿರುವುದಾಗಿ ಒಪ್ಪಿಕೊಂಡಿದ್ದ ಪಾಕಿಸ್ತಾನ, ಯಾವುದೇ ಕಾರಣಕ್ಕೂ ಇದನ್ನು ಉಲ್ಲಂಘಿಸುವುದಿಲ್ಲವೆಂದು ಭರವಸೆ ನೀಡಿತ್ತು. ಆದರೆ, ತನ್ನ ಮಾತಿಗೆ ಬದ್ಧವಾಗಿರದೇ ಕೆಲವೇ ಗಂಟೆಗಳ ಅವಧಿಯಲ್ಲಿ ಮೂರು ಗ್ರೆನೇಡ್ ದಾಳಿ ನಡೆಸಿದೆ.
ಬಿಎಸ್‌ಎಫ್ ಪೇದೆಗಳಾದ ವಿಜಯ್ ಕುಮಾರ್ ಮತ್ತು ಎಎಸ್‌ಐ ನಾರಾಯಣ್ ಯಾದವ್ ಪಾಕಿಸ್ತಾನದ ಗುಂಡಿದ ಬಲಿಯಾದ ಯೋಧರು.
ಪತೇ ಕಡಲ್‌ನ ಸಿಆರ್‌ಪಿಎಫ್ 82ನೇ ಬ್ಯಾಟಲಿಯನ್ ಮೇಲೆ ಉಗ್ರರು ಮೊದಲ ಗ್ರ್ಯಾನೇಡ್ ದಾಳಿ ನಡೆಸಿದ್ದು, ಮೂವರು ಸಿಆರ್‌ಪಿಎಫ್ ಯೋಧರು, ಒಬ್ಬ ನಾಗರಿಕ ಗಾಯಗೊಂಡಿದ್ದಾನೆ. ಎರಡನೇ ದಾಳಿಯಲ್ಲಿ ಬಾದ್‌ಶಾ ಸೇತುವೆಯ ಸಿಆರ್‌ಪಿಎಫ್ ನೆಲೆ ಮೇಲೆ ನಡೆದ ಮತ್ತೊಂದು ದಾಳಿಯಲ್ಲಿ ಯೋಧರೊಬ್ಬರು ಗಾಯಗೊಂಡಿದ್ದಾರೆ. ಮತ್ತೊಂದು ದಾಳಿಯಲ್ಲಿಯೂ ಸೈನಿಕರೊಬ್ಬರಿಗೆ ಗಾಯವಾಗಿದೆ.
'ಘಟನೆ ನಡೆದ ಸ್ಥಳದಲ್ಲಿ ಆರು ಸಿಆರ್‌ಪಿಎಫ್ ಯೋಧರನ್ನು ನೇಮಿಸಲಾಗಿತ್ತು. ಆಟೋದಲ್ಲಿದ್ದ ಉಗ್ರರು ಸೈನಿಕ ವಾಹನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. 132ನೇ ಬ್ಯಾಟಲಿಯನ್‌ನ ಸಿಬ್ಬಂದಿಯೂ ದಾಳಿಯಿಂದ ಗಾಯಗೊಂಡಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ,' ಎಂದು ಸೈನ್ಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
