ಶ್ರೀನಗರ(ಸೆ.30): ಪಾಕಿಸ್ತಾನದಿಂದ ಮತ್ತೊಮ್ಮೆ ಕದನ ವಿರಾಮ ಉಲ್ಲಂಘನೆಯಾಗಿದೆ. ಅಕ್ನೋರ್ ಗಡಿ ಪ್ರದೇಶದಲ್ಲಿ ಪಾಕ್ ಯೋಧರಿಂದ ಅಪ್ರಚೋದಿತ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ.

ಕಳೆದ ಎರಡು ದಿನಗಳಿಂದ ಪಾಕ್ ಸೈನಿಕರು ಐದನೇ ಬಾರಿ ಗುಂಡಿನ ದಾಳಿ ನಡೆಸಿದ್ದಾರೆ. ಪಾಕ್ ದಾಳಿಗೆ ಭಾರತೀಯ ಸೈನಿಕರು ಪ್ರತಿದಾಳಿ ನಡೆಸಿದ್ದಾರೆ. ಇದುವರೆಗೂ ಯಾವುದೇ ಸಾವು-ನೋವು ಸಂಭವಿಸಿದ ಕುರಿತಂತೆ ವರದಿಯಾಗಿಲ್ಲ.

ಗಡಿ ಭಾಗದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ರಾಜ್'ನಾಥ್ ಸಿಂಗ್ ದೆಹಲಿಯಲ್ಲಿ ಹಿರಿಯ ಸೇನಾಧಿಕಾರಿಗಳ ಜೊತೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ಕೇಂದ್ರ ಆಂತರಿಕ ಭದ್ರತಾ ಸಭೆಯ ನಂತರ ಸರ್ಕಾರ ಯಾವ ತೀರ್ಮಾನ ಕೈಗೊಳ್ಳಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

ಗಡಿಯಲ್ಲಿ ಪಾಕ್ ಸೇನೆಯಿಂದ ದಾಳಿ ನಡೆಯುವ ಸಾಧ್ಯತೆಯ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಭದ್ರತೆಯನ್ನು ಬಲಪಡಿಸಲಾಗಿದೆ. ರಾಜಸ್ಥಾನದ ಏರ್'ಪೋರ್ಟ್ ಸೇರಿದಂತೆ ಬಿಕಾನೇರ್, ಸೂರತ್'ಗಡ್, ಬಾಡ್'ಮೇರ್ ವಾಯುನೆಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇನ್ನು ಮುನ್ನೆಚ್ಚರಿಕಾ ಕ್ರಮವಾಗಿ ಪಂಜಾಬ್ ಗಡಿಭಾಗದಲ್ಲಿರುವ ಪಠಾಣ್'ಕೋಟ್ ಗ್ರಾಮದ ಜನರನ್ನು ಸ್ಥಳಾಂತರಿಸಲಾಗಿದೆ.