ನವದೆಹಲಿ :  ಪಾಕಿಸ್ತಾನದ ಉಗ್ರ ಸಂಘಟನೆಗಳು ಭಾರತದ ವಿರುದ್ಧ ಸಮುಂದರಿ ಜಿಹಾದ್ (ಸಮುದ್ರ ದಾಳಿ)ಗೆ ಉಗ್ರರನ್ನು ಸಜ್ಜುಗೊಳಿಸುತ್ತಿವೆ ಎಂಬ ಆಘಾತಕಾರಿ ಸಂಗತಿಯನ್ನು ಸ್ವತಃ ಗೃಹ ಖಾತೆ ರಾಜ್ಯ ಸಚಿವ ಹಂಸರಾಜ್ ಅಹೀರ್ ಬುಧವಾರ ಬಹಿರಂಗ ಪಡಿಸಿದ್ದಾರೆ. 

ರಾಜ್ಯಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ನೀರಿನ ಆಳದಲ್ಲಿ ದಾಳಿ  ನಡೆಸಲು ಉಗ್ರರಿಗೆ ತರಬೇತಿ ನೀಡುವುದನ್ನು ಮುಂದುವರಿಸಿವೆ ಮತ್ತು ಭಾರತದ ವಿರುದ್ಧ ಸಮುಂದರಿ ಜಿಹಾದ್  (ಸಮುದ್ರದಲ್ಲಿ ಭಯೋತ್ಪಾದಕ ದಾಳಿ)ಗೆ ಉತ್ತೇಜನ ನೀಡುತ್ತಿವೆ ಎಂಬ ಮಾಹಿತಿ ಸರ್ಕಾರಕ್ಕೆ ಲಭ್ಯವಾಗಿದೆ ಎಂದು ಹೇಳಿದ್ದಾರೆ. 

ಸದ್ಯ ಲಭ್ಯವಿರುವ ಮಾಹಿತಿಯ ಪ್ರಕಾರ  26/11 ರ ಮುಂಬೈ ದಾಳಿ ರೀತಿ ಬಂದರು, ಸರಕು ಸಾಗಣೆ ಹಡಗುಗಳು ಮತ್ತು ತೈಲ  ಟ್ಯಾಂಕರ್‌ಗಳ ಮೇಲೆ ಸಮುದ್ರ ಮಧ್ಯದಲ್ಲಿ ದಾಳಿ ನಡೆಸಲು ಯಾವುದೇ ಭಯೋತ್ಪಾದಕ ಸಂಘಟನೆ ಸಂಚು ರೂಪಿಸಿರುವ ಬಗ್ಗೆ ಖಚಿತಪಟ್ಟಿಲ್ಲ. ಆದರೆ, ಪಾಕ್ ಮೂಲದ ಭಯೋತ್ಪಾದಕ ಸಂಘಟನೆಗಳು ತಮ್ಮ ಸದಸ್ಯರಿಗೆ ನೀರಿನ ಆಳದಲ್ಲಿ ದಾಳಿ ನಡೆಸುವ ತರಬೇತಿಯನ್ನು ಮುಂದುವರಿಸಿವೆ ಮತ್ತು ಭಾರತದ ವಿರುದ್ಧ ಸಮುಂದರಿ ಜಿಹಾದ್‌ಗೆ ಉತ್ತೇಜನ ನೀಡುತ್ತಿರುವುದು ತಿಳಿದುಬಂದಿದೆ ಎಂದು ಅಹೀರ್ ಹೇಳಿದ್ದಾರೆ.