ನವದೆಹಲಿ[ಮಾ.02]: ಭಾರತೀಯ ವಾಯುಪಡೆ ನಡೆಸಿದ ದಾಳಿಯಲ್ಲಿ ಯಾವುದೇ ಉಗ್ರರು ಸಾವನ್ನಪ್ಪಿಲ್ಲ. ಭಾರತ ಹೇಳಿದಂತೆ ಬಾಲಾಕೋಟ್‌ನಲ್ಲಿ ಯಾವುದೇ ಉಗ್ರ ನೆಲೆಗಳು ಇಲ್ಲ ಎಂದು ವಾದಿಸುತ್ತಿದ್ದ ಪಾಕಿಸ್ತಾನ, ಇದೀಗ ತನ್ನ ವಾದವನ್ನು ಸಮರ್ಥಿಸಲು ಹೊಸ ತಂತ್ರ ರೂಪಿಸಿದೆ.

ಭಾರತ ನಡೆಸಿದ ದಾಳಿಯ ವೇಳೆ ಅರಣ್ಯದಲ್ಲಿ ಪೈನ್‌ ಮರಗಳು ಹಾನಿಯಾಗಿವೆ. ಇದು ಜೈವಿಕ ಭಯೋತ್ಪಾದನೆ ಎಂದು ವಿಶ್ವಸಂಸ್ಥೆಗೆ ದೂರು ನೀಡಲು ಪಾಕಿಸ್ತಾನ ನಿರ್ಧರಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಪಾಕಿಸ್ತಾನ ಹವಾಮಾನ ಬದಲಾವಣೆ ಖಾತೆ ಸಚಿವ ಮಲಿಕ್‌ ಅಮೀನ್‌ ಇಸ್ಲಾಮ್‌, ಭಾರತದ ವಾಯುದಾಳಿಯಿಂದ ನಮ್ಮ ರಕ್ಷಿತ ಅರಣ್ಯ ನಾಶವಾಗಿದೆ. ದಾಳಿಯಿಂದ ಅಪಾರ ಪ್ರಮಾಣ ಪೈನ್‌ ಮರಗಳು ಧರೆಗುರುಳಿವೆ. ಇದರಿಂದ ಪರಿಸರ ಮೇಲೆ ಭಾರೀ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. ಭಾರತ ನಡೆಸಿದ್ದು ಜೈವಿಕ ಭಯೋತ್ಪಾದನೆ. ಹೀಗಾಗಿ ದಾಳಿಯಿಂದ ಅರಣ್ಯಕ್ಕೆ ಆಗಿರುವ ಹಾನಿಯ ಅಂದಾಜು ಮಾಡಲಾಗುತ್ತಿದೆ. ಈ ಕುರಿತ ವರದಿ ನಮ್ಮ ಕೈ ಸೇರಿದ ಬಳಿಕ ನಾವು ವಿಶ್ವಸಂಸ್ಥೆ ಮತ್ತು ಇತರೆ ವೇದಿಕೆಗಳಿಗೆ ಈ ಕುರಿತು ದೂರು ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.