ಮಾರುಕಟ್ಟೆಯಲ್ಲಿ ಹಾಲಿ ಇರುವ ಕರೆನ್ಸಿ ನೋಟುಗಳನ್ನು ಸಂಪೂರ್ಣವಾಗಿ ಹಿಂಪಡೆಯಲು ಪಾಕಿಸ್ತಾನಕ್ಕೆ ಮೂರರಿಂದ ಐದು ವರ್ಷಗಳು ಬೇಕಾಗುತ್ತವೆ.

ಇಸ್ಲಾಮಾಬಾದ್(ಡಿ.19): ಭಾರತದಲ್ಲಿ ಕಪ್ಪುಹಣದ ವಿರುದ್ಧ ಹೋರಾಟ ನಡೆಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನ.8ರಂದು ₹500, ₹1 ಸಾವಿರ ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ್ದರು. ಅದೇ ದಾರಿಯನ್ನು ಪಾಕಿಸ್ತಾನ ಕೂಡ ಕಂಡುಕೊಂಡಿದೆ. ಪಾಕಿಸ್ತಾನದಲ್ಲಿ ಕಪ್ಪುಹಣದ ಸಮಸ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ₹5 ಸಾವಿರ ಮುಖ ಬೆಲೆಯ ನೋಟನ್ನು ಹಿಂಪಡೆಯುವ ಬಗ್ಗೆ ಅಲ್ಲಿನ ಸೆನೆಟ್‌'ನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಪಾಕಿಸ್ತಾನ ಮುಸ್ಲಿಂ ಲೀಗ್‌'ನ ಹಿರಿಯ ಸೆನೆಟರ್ ಉಸ್ಮಾನ್ ಷರೀಫ್ ಖಾನ್ ಈ ಬಗೆಗಿನ ಗೊತ್ತುವಳಿಯನ್ನು ಅಲ್ಲಿನ ಮೇಲ್ಮನೆಯಲ್ಲಿ ಮಂಡಿಸಿದರು. ಈ ನಿರ್ಧಾರದಿಂದಾಗಿ ದೇಶದಲ್ಲಿ ಕಾನೂನಿನ ವ್ಯಾಪ್ತಿ ಮೀರಿ ಕಪ್ಪುಹಣ ಬಹಿರಂಗವಾಗುತ್ತದೆ ಎಂಬ ಅಂಶವನ್ನು ಅವರು ಪ್ರಸ್ತಾಪಿಸಿದ್ದಾರೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.

ಮಾರುಕಟ್ಟೆಯಲ್ಲಿ ಹಾಲಿ ಇರುವ ಕರೆನ್ಸಿ ನೋಟುಗಳನ್ನು ಸಂಪೂರ್ಣವಾಗಿ ಹಿಂಪಡೆಯಲು ಪಾಕಿಸ್ತಾನಕ್ಕೆ ಮೂರರಿಂದ ಐದು ವರ್ಷಗಳು ಬೇಕಾಗುತ್ತವೆ. ಪಾಕಿಸ್ತಾನದಲ್ಲಿ 3.4 ಟ್ರಿಲಿಯನ್ ನೋಟುಗಳು ಚಲಾವಣೆಯಲ್ಲಿವೆ. ಈ ಪೈಕಿ ₹5 ಸಾವಿರ ಮೌಲ್ಯದ ನೋಟುಗಳ ಸಂಖ್ಯೆಯೇ 1.2 ಟ್ರಿಲಿಯನ್ ಆಗಿವೆ ಎಂದು ಪಾಕಿಸ್ತಾನದ ಕಾನೂನು ಸಚಿವ ಝಹೀದ್ ಅಹ್ಮದ್ ತಿಳಿಸಿದ್ದಾರೆ.