ಇಸ್ಲಾಮಾಬಾದ್(ಮಾ.05): ಪುಲ್ವಾಮಾ ದಾಳಿಯ ಬಳಿಕ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಭಾರತವೂ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳು ಪಾಕಿಸ್ತಾನದ ಮೇಲೆ ಒತ್ತಡ ಹಾಕಿದ್ದವು. ಉಗ್ರವಾದಕ್ಕೆ ಪಾಕ್ ಕುಮ್ಮಕ್ಕು ನೀಡುತ್ತಿರುವುದನ್ನು ಭಾರತ ವಿಶ್ವ ಸಮುದಾಯಕ್ಕೆ ಮನವರಿಕೆ ಮಾಡಿ ಕೊಟ್ಟಿತ್ತು.

ಅಂತಾರಾಷ್ಟ್ರೀಯ ಸಮುದಾಯದ ಒತ್ತಡಕ್ಕೆ ಕೊನೆಗೂ ಮಣಿದಿರುವ ಪಾಕಿಸ್ತಾನ ಇಂದು  ಜೈಷ್ -ಎ-ಮೊಹ್ಮದ್ ಉಗ್ರ ಸಂಘಟನೆ  ಮುಖ್ಯಸ್ಥ ಮಸೂದ್ ಅಝರ್ ಸಹೋದರ  ಹಾಗೂ ಇತರ ನಿಷೇಧಿತ ಉಗ್ರ ಸಂಘಟನೆಯ 43 ಸದಸ್ಯರನ್ನು ಬಂಧಿಸಿದೆ.

ಮಸೂದ್ ಅಝರ್ ಸಹೋದರ ಮುಫ್ತಿ ಅಬ್ದುರ್ ರೌಪ್ ಮತ್ತು ಹಮದ್ ಅಝರ್  ಸೇರಿದಂತೆ ಇತರರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಿಷೇಧಿತ ಎಲ್ಲಾ ಸಂಘಟನೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪಾಕಿಸ್ತಾನ ಒಳಾಡಳಿತ ಸಚಿವ ಶಹರಿಯಾರ್ ಖಾನ್ ಅಫ್ರಿದಿ ಭರವಸೆ ನೀಡಿದ್ದಾರೆ.

ಸರ್ಕಾರದ ಆದೇಶದ ಪ್ರಕಾರ ನಿಷೇಧಿತ ಎಲ್ಲಾ ಉಗ್ರ ಸಂಘಟನೆಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು  ಎಂದು ವಿದೇಶಾಂಗ ಕಚೇರಿ ವಕ್ತಾರ ಮೊಹಮ್ಮದ್ ಫೈಸಲ್ ತಿಳಿಸಿದ್ದಾರೆ.