ಪಾಕಿಸ್ತಾನದ ಶಾಲೆಯೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತ ಪ್ರೇಮವನ್ನು ಸಾರುವ ಹಾಡಿಗೆ ಮಕ್ಕಳು ನೃತ್ಯ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ನೃತ್ಯದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸರ್ಕಾರವು ಶಾಲೆಯ ವಿರುದ್ಧ ಕ್ರಮ ಕೈಗೊಂಡು ಮಾನ್ಯತೆ ರದ್ದು ಮಾಡಿದೆ. 

ಕರಾಚಿ[ಫೆ.18]: ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ಭಾರೀ ವೈರಲ್ ಆಗುತ್ತಿದೆ. ಪಾಕಿಸ್ತಾನದ ಕರಾಚಿಯ ಶಾಲೆಯೊಂದರಲ್ಲಿ ಮಕ್ಕಳು ಮಾಡಿರುವ ಆ ಒಂದು ಕಾರ್ಯಕ್ರಮ ಸದ್ಯ ಎಲ್ಲೆಡೆ ಚರ್ಚೆಯಾಗುತ್ತಿದೆ. ಪಾಕ್‌ನ ಶಾಲಾ ಮಕ್ಕಳು ಕಾರ್ಯಕ್ರಮವೊಂದರಲ್ಲಿ ಭಾರತ ಪ್ರೇಮ ಸಾರುವ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅಲ್ಲದೇ ಈ ನೃತ್ಯದ ವೇಳೆ ಮಕ್ಕಳ ಹಿಂಬದಿಯಲ್ಲಿ ವೇದಿಕೆಗೆ ಅಳವಡಿಸಲಾಗಿದ್ದ ಎಲ್‌ಇಡಿ ಪರದೆಯಲ್ಲಿ ತ್ರಿವರ್ಣ ಧ್ವಜ ಹಾರಾಡುತ್ತಿರುವುದೂ ಕಂಡು ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಶಾಲೆಯ ವಿರುದ್ಧ ಕ್ರಮ ಕೈಗೊಂಡಿರುವ ಅಲ್ಲಿನ ಸರ್ಕಾರ ಶಾಲೆಯ ಮಾನ್ಯತೆಯನ್ನು ರದ್ದುಗೊಳಿಸಿದೆ. ಮಕ್ಕಳು ಬಾಲಿವುಡ್ ನಾಯಕ ಶಾರುಖ್ ಖಾನ್ ನಟನೆಯ 'ಫಿರ್ ಭೀ ದಿಲ್ ಹೆ ಹಿಂದೂಸ್ತಾನಿ' ಸಿನಿಮಾದ ಟೈಟಲ್ ಹಾಡಿಗೆ ಹೆಜ್ಜೆ ಹಾಕಿದ್ದರು.

Scroll to load tweet…

ಸದ್ಯ ಈ ಶಾಲೆಯ ಮಾನ್ಯತೆ ರದ್ದುಗೊಳಿಸಿರುವ ಸಿಂಧ್ ಸರ್ಕಾರ 'ಒಂದು ಶಿಕ್ಷಣ ಸಂಸ್ಥೆಯಲ್ಲಿ ಇಂತಹ ಕಾರ್ಯಕ್ರಮಗಳ ಆಯೋಜನೆ ದೇಶದ ಘಟನೆಗೆ ಧಕ್ಕೆ ತರುತ್ತವೆ. ಇದನ್ನು ಯವುದೇ ಕಾರಣಕ್ಕೂ ನಾವು ಸಹಿಸುವುದಿಲ್ಲ' ಎಂದಿದೆ.

ಕರಾಚಿಯ ಮಾಮಾ ಬೇಬಿ ಕೇರ್ ಸ್ಕೂಲ್‌ನ ಮುಖ್ಯ ಶಿಕ್ಷಕರಿಗೆ ಈ ಕಾರ್ಯಕ್ರಮದ ಬಗ್ಗೆ ವಿವರಣೆ ನೀಡಿ, ಕಾರಣ ತಿಳಿಸುವಂತೆ ನೋಟಿಸ್ ಕೂಡಾ ನೀಡಲಾಗಿದೆ. ಇನ್ನು ಈ ಕಾರ್ಯಕ್ರಮದಲ್ಲಿ ಭಾರತ ಮಾತ್ರವಲ್ಲದೇ ಇನ್ನಿತರ ಹಲವು ದೇಶಗಳ ಸಂಸ್ಕೃತಿಯ ಚಿತ್ರಣ ನೀಡಲಾಗಿತ್ತು ಎನ್ನಲಾಗಿದೆ.