ನವದೆಹಲಿ [ಸೆ.10]: ಜಮ್ಮು-ಕಾಶ್ಮೀರಕ್ಕೆ ದೊರೆಯುತ್ತಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಕಾರಣ ಆಕ್ರೋಶದಿಂದ ಕುದಿಯುತ್ತಿರುವ ಪಾಕಿಸ್ತಾನವು ಭಾರತದ ಮೇಲೆ ‘ಸಮುಂದರಿ ಜಿಹಾದ್‌’ (ಸಮುದ್ರ ಮಾರ್ಗದಿಂದ ಬಂದು ದಾಳಿ) ನಡೆಸಬಹುದು ಎಂಬ ಆತಂಕ ಏಕೋ ನಿಜವಾಗುವಂತೆ ಕಾಣುತ್ತಿದೆ. ಕಾರಣ, ಕಳವಳಕಾರಿ ಬೆಳವಣಿಗೆಯಲ್ಲಿ, ಗುಜರಾತ್‌ನ ಸರ್‌ ಕ್ರೀಕ್‌ನಲ್ಲಿ ಯಾರೂ ಇಲ್ಲದ ದೋಣಿಗಳು ಪತ್ತೆಯಾಗಿವೆ. ಇದರ ಬೆನ್ನಲ್ಲೇ ದಕ್ಷಿಣ ಭಾರತದಲ್ಲಿ ಉಗ್ರರ ದಾಳಿ ನಡೆಯಬಹುದು ಎಂದು ಸೇನೆ ಸೋಮವಾರ ಎಚ್ಚರಿಕೆ ಸಾರಿದೆ.

ಕೆಲ ದಿನಗಳ ಹಿಂದಷ್ಟೇ ಸಮುಂದರಿ ಜಿಹಾದ್‌ ಕುರಿತು ನೌಕಾಪಡೆ ಕಟ್ಟೆಚ್ಚರ ಸಾರಿತ್ತು. ಅದಾದ ಬೆನ್ನಲ್ಲೇ ಲಂಕಾದಿಂದ ಆರು ಮಂದಿ ಉಗ್ರರು ತಮಿಳುನಾಡು ಪ್ರವೇಶಿಸಿದ್ದಾರೆ ಎಂಬ ವರದಿಗಳು ಬಂದಿದ್ದವು. ಈ ನಡುವೆ, ಗುಜರಾತಿನ ಸರ್‌ ಕ್ರೀಕ್‌ ಬಳಿ ಯಾರೂ ಇಲ್ಲದ ಬೋಟ್‌ಗಳು ಸಿಕ್ಕಿರುವುದು ಕಳವಳಕ್ಕೆ ಕಾರಣವಾಗಿದೆ.

ದಕ್ಷಿಣ ಭಾರತದಲ್ಲಿ ಉಗ್ರರ ದಾಳಿ ನಡೆಯುವ ಸಾಧ್ಯತೆ ಕುರಿತು ನಮಗೆ ಮಾಹಿತಿ ಲಭ್ಯವಾಗಿದೆ. ಸರ್‌ ಕ್ರೀಕ್‌ನಲ್ಲಿ ಕೆಲವೊಂದು ಬೋಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಯೋತ್ಪಾದಕರ ಉದ್ದೇಶವನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಸೇನೆಯ ದಕ್ಷಿಣ ಕಮಾಂಡ್‌ನ ಜನರಲ್‌ ಆಫೀಸರ್‌ ಕಮಾಂಡಿಂಗ್‌ ಇನ್‌ ಚೀಫ್‌ ಆಗಿರುವ ಲೆಫ್ಟಿನೆಂಟ್‌ ಜನರಲ್‌ ಎಸ್‌.ಕೆ.ಸೈನಿ ತಿಳಿಸಿದ್ದಾರೆ.

ಲಂಕಾದಿಂದ ಆರು ಉಗ್ರರು ಭಾರತ ಪ್ರವೇಶಿಸಿ, ವಿವಿಧ ನಗರಗಳನ್ನು ಪ್ರವೇಶಿಸಿದ್ದಾರೆ ಎಂಬ ಇತ್ತೀಚಿನ ವರದಿಗಳ ಹಿನ್ನೆಲೆಯಲ್ಲಿ ಈಗಾಗಲೇ ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಅದರಲ್ಲೂ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಬಸ್‌ ನಿಲ್ದಾಣ, ಪ್ರಾರ್ಥನಾ ಮಂದಿರಗಳು, ಮಾಲ್‌ಗಳು ಸೇರಿದಂತೆ ಹೆಚ್ಚಿನ ಜನ ಸೇರುವ ಪ್ರದೇಶಗಳಲ್ಲಿ ಬಿಗಿಬಂದೋಬಸ್‌್ತ ಏರ್ಪಡಿಸಲಾಗಿದೆ.