ಇಸ್ಲಾಮಾಬಾದ್‌ [ನ.04]: ನೂತನ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು-ಕಾಶ್ಮೀರ ಮತ್ತು ಲಡಾಖ್‌ ಅನ್ನು ಒಳಗೊಂಡ ಭಾರತದ ನೂತನ ಭೂಪಟಕ್ಕೆ ಪಾಕಿಸ್ತಾನ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಲಡಾಖ್‌ ಮತ್ತು ಜಮ್ಮು-ಕಾಶ್ಮೀರವನ್ನು ನೂತನ ಕೇಂದ್ರಾಡಳಿತ ಪ್ರದೇಶವಾಗಿ ರೂಪಿಸಿದ ಹಿನ್ನೆಲೆಯಲ್ಲಿ ಭಾರತ ಸರ್ಕಾರ ನೂತನ ನಕ್ಷೆಯನ್ನು ಶನಿವಾರ ಬಿಡುಗಡೆ ಮಾಡಿತ್ತು. ಆದರೆ ಇದಕ್ಕೆ ಆಕ್ಷೇಪ ಎತ್ತಿರುವ ಪಾಕಿಸ್ತಾನ, ಇಡೀ ಕಾಶ್ಮೀರ ಪ್ರಾಂತ್ಯ ಭಾರತದ ಅವಿಭಾಜ್ಯ ಅಂಗ ಎಂಬಂತಿರುವ ಭಾರತದ ರಾಜಕೀಯ ನಕ್ಷೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಇದು ತಪ್ಪು ಮತ್ತು ಅಸಮರ್ಥನೀಯವಾದದ್ದು ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳ ಸ್ಪಷ್ಟಉಲ್ಲಂಘನೆ ಎಂದು ದೂರಿದೆ.

ಭಾರತದ ಹೊಸ ರಾಜಕೀಯ ನಕ್ಷೆ ಬಿಡುಗಡೆಗೊಳಿಸಿದ ಕೇಂದ್ರ ಸರ್ಕಾರ!..

ಈ ಬಗ್ಗೆ ಭಾನುವಾರ ಪ್ರಕಟಣೆ ಹೊರಡಿಸಿದ ಪಾಕಿಸ್ತಾನ ವಿದೇಶಾಂಗ ಸಚಿವಾಲಯ, ‘ಭಾರತ ಶನಿವಾರ ಬಿಡುಗಡೆಗೊಳಿಸಿದ ನೂತನ ಭೂಪಟಗಳಲ್ಲಿ ಪ್ರಸ್ತುತ ಪಾಕಿಸ್ತಾನದ ಭಾಗಗಳಾಗಿರುವ ಗಿಲ್ಗಿಟ್‌-ಬಾಲ್ಟಿಸ್ತಾನ ಮತ್ತು ಆಜಾದ್‌ ಜಮ್ಮು ಮತ್ತು ಕಾಶ್ಮೀರದ ಭಾಗಗಳು ಭಾರತದ ವ್ಯಾಪ್ತಿಯಲ್ಲಿವೆ. ಇದು ತಪ್ಪು, ಕಾನೂನಾತ್ಮಕವಾಗಿ ಅಸಮರ್ಥನೀಯ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳ ಸಂಪೂರ್ಣ ಉಲ್ಲಂಘನೆ’ ಎಂದು ಪ್ರತಿಪಾದಿಸಿದೆ.

ಅಲ್ಲದೆ, ವಿಶ್ವಸಂಸ್ಥೆಯ ನಿರ್ಣಯಗಳಿಗನುಗುಣವಾಗಿ ಭಾರತ ಆಕ್ರಮಿತ ಜಮ್ಮು-ಕಾಶ್ಮೀರ ಜನತೆಯ ಹಕ್ಕುಗಳ ರಕ್ಷಣೆ ಹೋರಾಟಕ್ಕೆ ಪಾಕಿಸ್ತಾನ ನಿರಂತರ ಬೆಂಬಲ ನೀಡಲಿದೆ ಎಂದು ಹೇಳಿದೆ. ಈ ಮೂಲಕ ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಯತ್ನವನ್ನು ಪಾಕಿಸ್ತಾನ ಮುಂದುವರಿಸಿದಂತಾಗಿದೆ.