ಜಿನೆವಾ[ಜೂ.20]: 2016ರಲ್ಲಿ ಕುವೈತ್ ನಲ್ಲಿ ಮತ್ತು 2017ರಲ್ಲಿ ಪಾಕಿಸ್ತಾನದಲ್ಲಿ ದಾಖಲಾಗಿದ್ದ ಎರಡು ಉಷ್ಣಾಂಶಗಳನ್ನು ಭೂಮಿಯ ಮೇಲೆ ದಾಖಲಾದ 3 ಮತ್ತು 4ನೇ ಗರಿಷ್ಠ ತಾಪಮಾನ ಎಂದು ವಿಶ್ವ ಹವಾಮಾನ ಸಂಘಟನೆ ಅಧಿಕೃತವಾಗಿ ಘೋಷಿಸಿದೆ.

2016ರ ಜುಲೈ 21ರಂದು ಕುವೈತ್‌ನ ಮಿತ್ರಿಭಾದಲ್ಲಿ 53.9 ಡಿ.ಸೆ ಮತ್ತು 2017ರ ಮೇ 28ರಂದು ಪಾಕಿಸ್ತಾನದ ತುರ್ಬತ್‌ನಲ್ಲಿ 53.7 ಡಿ.ಸೆ ಉಷ್ಣಾಂಶ ದಾಖಲಾಗಿತ್ತು. ಆದರೆ ಇವುಗಳ ಖಚಿತತೆ ಬಗ್ಗೆ ಸಾಕಷ್ಟು ಅನುಮಾನಗಳಿದ್ದವು. ಆದರೆ ನಾನಾ ಮೂಲಗಳಿಂದ ಈ ಉಷ್ಣಾಂಶ ದಾಖಲಾಗಿದ್ದು ಖಚಿತ ಎಂಬುದನ್ನು ವಿಶ್ವ ಹವಾಮಾನ ಇಲಾಖೆ ಕಂಡುಕೊಂಡಿದ್ದು, ಈ ಎರಡನ್ನೂ ಕ್ರಮವಾಗಿ ಭೂಮಿಯ ಮೇಲೆ ದಾಖಲಾದ ಗರಿಷ್ಠ ಉಷ್ಣಾಂಶ ಎಂದು ಅಧಿಕೃತವಾಗಿ ಘೋಷಿಸಿದೆ

ವಿಶ್ವ ಹವಾಮಾನ ಸಂಘಟನೆ ಪ್ರಕಾರ 1913ರ ಜೂನ್ 30ರಂದು ಅಮೆರಿಕದ ಕ್ಯಾಲಿಫೋರ್ನಿಯಾದ ಡೆತ್ ವ್ಯಾಲಿಯಲ್ಲಿರುವ ಫರ್ನೇಸ್ ಕ್ರೀಕ್‌ನಲ್ಲಿ ದಾಖಲಾದ 56.7 ಡಿ.ಸೆ. ಹಾಲಿ ಮೊದಲ ಸ್ಥಾನದಲ್ಲಿದೆ. ಟ್ಯುನೇಷಿಯಾದ ಕೆಬಿಲಿಯಲ್ಲಿ 1939ರಲ್ಲಿ ದಾಖಲಾದ 55 ಡಿ.ಸೆ.2ನೇ ಸ್ಥಾನದಲ್ಲಿದೆ.