ಕರ್ತಾರ್ಪುರ(ನ.28): ಪಾಕಿಸ್ತಾನ ಗಡಿಯಲ್ಲಿರುವ ಐತಿಹಾಸಿಕ ಗುರುದ್ವಾರ ದರ್ಬಾರ್ ಗೆ ಭಾರತದಿಂದ ಸಂಪರ್ಕ ಕಲ್ಪಿಸುವ ಕರ್ತಾರ್ಪುರ ಸಾಹಿಬ್ ಕಾರಿಡಾರ್ ಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಗುರುದಾಸ್ ಪುರದಲ್ಲಿರುವ ಡೇರೇ ಬಾಬಾ ನಾನಕ್ ಗೆ ಸಂಪರ್ಕಿಸುವ 4 ಕಿ.ಮೀ ಉದ್ದದ ಮಾರ್ಗಕ್ಕೆ ಇಮ್ರಾನ್ ಖಾನ್ ಶಂಕು ಸ್ಥಾಪನೆ ಮಾಡಿದ್ದಾರೆ. ಭಾರತೀಯ ಸಿಖ್ ಯಾತ್ರಿಕರಿಗೆ ವೀಸಾ ಇಲ್ಲದೇ ಗುರುದ್ವಾರಕ್ಕೆ ಈ ಮಾರ್ಗ ಸಂಪರ್ಕಿಸಲಿದೆ.

ಇನ್ನು ಜಾಬ್ ಸಚಿವ ನವಜೋತ್ ಸಿಂಗ್ ಸಿಧು ಲಾಹೋರ್ ಗೆ ನಿನ್ನೆಯೇ ತೆರಳಿದ್ದು, ಇಂದು ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. 

3 ತಿಂಗಳ ಹಿಂದಷ್ಟೇ ಪಾಕಿಸ್ತಾನ ಪ್ರಧಾನಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತೆರಳಿದ್ದ ನವಜೋತ್ ಸಿಂಗ್ ಸಿಧು, ಇಮ್ರಾನ್ ಖಾನ್ ಬಳಿ ಕರ್ತಾರ್ಪುರ ಮಾರ್ಗ ತೆರೆಯುವಂತೆ ಮನವಿ ಮಾಡಿಕೊಂಡಿದ್ದರು. 

ಸಿಖ್ ಧರ್ಮ ಸಂಸ್ಥಾಪಕ ಗುರು ನಾನಕ್ ಅವರ ಸಮಾಧಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನರೋವಲ್ ಜಿಲ್ಲೆಯಲ್ಲಿದೆ. ಅಂತರಾಷ್ಟ್ರೀಯ ಗಡಿಯಲ್ಲಿ ನಿಂತರೆ ಸಮಾಧಿ ಇರುವ ಕರ್ತಾರ್ಪುರ ಗುರುದ್ವಾರ ಕಾಣುತ್ತದೆ. ಆದರೆ, ಅಲ್ಲಿಗೆ ಹೋಗಲು ಸಿಖ್ ಧರ್ಮೀಯರು ಪಾಕಿಸ್ತಾನದ ವೀಸಾಗೆ ಅರ್ಜಿ ಸಲ್ಲಿಸಬೇಕಿತ್ತು.

ಅಂತರಾಷ್ಟ್ರೀಯ ಗಡಿಯಲ್ಲಿರುವ ಗುರುದಾಸ್ಪುರ ಜಿಲ್ಲೆಯಲ್ಲಿ ಕಾರ್ತಾರ್ಪುರ ಕಾರಿಡಾರ್ ನಿರ್ಮಾಣ ಮಾಡುವ ಕುರಿತಂತೆ ಕೇಂದ್ರ ಸರ್ಕಾರ ನ.22ರಂದು ನಿರ್ಧಾರ ತೆಗೆದುಕೊಂಡಿತ್ತು. 

ಇದಾದ ಬಳಿಕ ಸಿಖ್ ಭಕ್ತರಿಗೆ ಗುರು ನಾನಕ್ ರ ಸಮಾಧಿ ದರ್ಶನಕ್ಕೆ ಅವಕಾಶ ಕಲ್ಪಿಸುವುದಾಗಿ ಪಾಕಿಸ್ತಾನ ಘೋಷಣೆ ಮಾಡಿತ್ತು.