ಇಸ್ಲಾಮಾಬಾದ್‌[ಮಾ.04]: ಜೈಷ್‌ ಎ ಮಹಮ್ಮದ್‌ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ಹಲವು ದಶಕಗಳಿಂದ ಪೋಷಿಸಿಕೊಂಡು ಬಂದು, ಭಾರತದಲ್ಲಿ ಉಗ್ರ ಕೃತ್ಯ ನಡೆಸಲು ನೆರವು ನೀಡುತ್ತಿದ್ದ ಪಾಕಿಸ್ತಾನ, ಇದೀಗ ಅದೇ ಉಗ್ರನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ಬೆಂಬಲ ನೀಡುವ ಸಾಧ್ಯತೆ ಇದೆ.

ಮಸೂದ್‌ನ ಜಾಗತಿಕ ಉಗ್ರ ಎಂದು ಘೋಷಿಸಬೇಕು ಎಂದು ಭಾರತ ಸರ್ಕಾರ ವಿಶ್ವಸಂಸ್ಥೆಯಲ್ಲಿ ಹಲವು ವರ್ಷಗಳಿಂದ ಪ್ರಸ್ತಾಪ ಮಂಡಿಸುತ್ತಲೇ ಇದೆ. ಆದರೆ ತನ್ನ ಮಿತ್ರ ಚೀನಾದ ಮೂಲಕ ಪಾಕಿಸ್ತಾನ, ಭಾರತದ ಯತ್ನಕ್ಕೆ ಅಡ್ಡಿ ಮಾಡುತ್ತಲೇ ಇತ್ತು.

ಆದರೆ ಇತ್ತೀಚಿನ ಪುಲ್ವಾಮಾ ದಾಳಿಯ ಬಳಿಕ ಅಜರ್‌ಗೆ ಜಾಗತಿಕ ಉಗ್ರ ಪಟ್ಟಕಟ್ಟಲು ಫ್ರಾನ್ಸ್‌, ಅಮೆರಿಕ, ಬ್ರಿಟನ್‌ ಸೇರಿ ಹಲವು ದೇಶಗಳು ವಿಶ್ವಸಂಸ್ಥೆಯಲ್ಲಿ ಹೊಸದಾಗಿ ಪ್ರಸ್ತಾಪ ಮಾಡಿವೆ. ಈ ಪ್ರಸ್ತಾಪವನ್ನು ಬೆಂಬಲಿಸುವ ಬಗ್ಗೆ ಪಾಕಿಸ್ತಾನ ಗಂಭೀರ ಚಿಂತನೆ ನಡೆಸಿದೆ ಎಂದು ಪಾಕಿಸ್ತಾನದ ಕೆಲ ಮಾಧ್ಯಮಗಳು ವರದಿ ಮಾಡಿವೆ.

ಮಸೂದ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸುವುದರಿಂದ, ಅವನಿಗೆ ಸೇರಿದ ಎಲ್ಲ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ಅಲ್ಲದೆ, ಅವನ ಪಾಸ್‌ಪೋರ್ಟ್‌ ರದ್ದಾಗಲಿದ್ದು, ಅವನ ಇತರ ದೇಶಗಳ ಸಂಚಾರದ ಮೇಲೆಯೂ ನಿರ್ಬಂಧ ಹೇರಲಾಗುತ್ತದೆ.