ಲಾಹೋರ್‌[ಫೆ.23]: ಭಾರತ ಯುದ್ಧ ಸಾರಬಹುದು ಎಂಬ ಭೀತಿ ಹಾಗೂ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದಿರುವ ಪಾಕಿಸ್ತಾನ, ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ದಾಳಿ ನಡೆಸಿದ ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆಯ ಕೇಂದ್ರ ಕಚೇರಿಯನ್ನು ತನ್ನ ‘ವಶ’ಕ್ಕೆ ತೆಗೆದುಕೊಂಡಿದೆ.

ಪಂಜಾಬ್‌ ಪ್ರಾಂತ್ಯದಲ್ಲಿರುವ ಹಾಗೂ ಪ್ರಮುಖ ನಗರ ಲಾಹೋರ್‌ನಿಂದ 400 ಕಿ.ಮೀ. ದೂರದಲ್ಲಿರುವ ಬಹಾವಲ್‌ಪುರದಲ್ಲಿ ಜೈಷ್‌ ಎ ಮೊಹಮ್ಮದ್‌ ಉಗ್ರ ಸಂಘಟನೆ ಕ್ಯಾಂಪಸ್‌ ಹೊಂದಿದೆ. ಅಲ್ಲಿ ಮದ್ರೆಸ್ಸಾತುಲ್‌ ಸಾಬೀರ್‌ ಹಾಗೂ ಜಾಮಾ ಎ ಮಸ್ಜಿದ್‌ ಶುಭಾನಲ್ಲಾ ಎಂಬ ಎರಡು ಧಾರ್ಮಿಕ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಈ ಕ್ಯಾಂಪಸ್ಸೇ ಜೈಷ್‌ ಸಂಘಟನೆಯ ಕೇಂದ್ರ ಕಚೇರಿಯಾಗಿಯೂ ಕಾರ್ಯನಿರ್ವಹಿಸುತ್ತಿದೆ. ಇದೀಗ ಪಾಕಿಸ್ತಾನದ ಪಂಜಾಬ್‌ ಸರ್ಕಾರ ಈ ಕ್ಯಾಂಪಸ್‌ನ ನಿಯಂತ್ರಣವನ್ನು ತನ್ನ ವಶಕ್ಕೆ ಪಡೆದಿದ್ದು, ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ. ಈ ಕುರಿತು ಪಾಕಿಸ್ತಾನದ ವಾರ್ತಾ ಸಚಿವ ಫವಾದ್‌ ಚೌಧರಿ ಮಾಹಿತಿ ನೀಡಿದ್ದಾರೆ.

ಪ್ರಧಾನಿ ಇಮ್ರಾನ್‌ ಖಾನ್‌ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ರಾಷ್ಟ್ರೀಯ ಭದ್ರತಾ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಈ ಕ್ರಮ ಜರುಗಿಸಲಾಗಿದೆ ಎಂದು ಪಾಕಿಸ್ತಾನದ ಗೃಹ ಸಚಿವಾಲಯ ಕೂಡ ಹೇಳಿಕೆ ನೀಡಿದೆ.

ಸದ್ಯ ಜೈಷ್‌ ಎ ಮೊಹಮ್ಮದ್‌ನ ಕೇಂದ್ರ ಕಚೇರಿಯಲ್ಲಿ 600 ವಿದ್ಯಾರ್ಥಿಗಳು ಹಾಗೂ 70 ಶಿಕ್ಷಕರು ಇದ್ದಾರೆ. ಪಂಜಾಬಿನ ಪೊಲೀಸರು ಆ ಕ್ಯಾಂಪಸ್‌ಗೆ ಭದ್ರತೆ ಹಾಗೂ ರಕ್ಷಣೆಯನ್ನು ಒದಗಿಸುತ್ತಿದ್ದಾರೆ.

2008ರಲ್ಲಿ ಮುಂಬೈ ಮೇಲೆ ನಡೆದ ದಾಳಿಯ ರೂವಾರಿ ಮೊಹಮ್ಮದ್‌ ಹಫೀಜ್‌ ಸಯೀದ್‌ ಮುನ್ನಡೆಸುತ್ತಿದ್ದ ಜಮಾತ್‌ ಉದ್‌ ದಾವಾ ಸೇರಿ ಎರಡು ಸಂಘಟನೆಗಳಿಗೆ ಗುರುವಾರವಷ್ಟೇ ಪಾಕಿಸ್ತಾನ ನಿಷೇಧ ಹೇರಿತ್ತು. ಅದರ ಬೆನ್ನಲ್ಲೇ ಜೈಷ್‌ ವಿರುದ್ಧವೂ ಕ್ರಮ ಜರುಗಿಸಿದೆ.

ಫೆ.14ರಂದು ಪುಲ್ವಾಮಾದಲ್ಲಿ 40 ಸಿಆರ್‌ಪಿಎಫ್‌ ಯೋಧರನ್ನು ಜೈಷ್‌ ಉಗ್ರ ಸಂಘಟನೆಯ ಭಯೋತ್ಪಾದಕನೊಬ್ಬ ಕಾರು ಬಾಂಬ್‌ ಸ್ಫೋಟಿಸಿ ಹತ್ಯೆ ಮಾಡಿದ್ದ. ಈ ಘಟನೆಯ ಹೊಣೆಯನ್ನು ಜೈಷ್‌ ಎ ಮೊಹಮ್ಮದ್‌ ಒಪ್ಪಿಕೊಂಡಿತ್ತು.

1999ರ ಕಂದಹಾರ್‌ ವಿಮಾನ ಅಪಹರಣ ಪ್ರಕರಣದ ಸಂದರ್ಭದಲ್ಲಿ ಬಿಡುಗಡೆಯಾದ ಬಳಿಕ ಮೌಲಾನಾ ಮಸೂದ್‌ ಅಜರ್‌ ಜೈಷ್‌ ಸಂಘಟನೆಯನ್ನು ಸ್ಥಾಪಿಸಿದ್ದು, ಆತ ಬಹಾವಲ್‌ಪುರವನ್ನೇ ತನ್ನ ಕಾರ್ಯಕ್ಷೇತ್ರ ಮಾಡಿಕೊಂಡಿದ್ದಾನೆ. 2002ರಲ್ಲೇ ಜೈಷ್‌ಗೆ ಪಾಕಿಸ್ತಾನ ನಿಷೇಧ ಹೇರಿದ್ದರೂ, ಅದು ಬಹಿರಂಗವಾಗಿಯೇ ಕಾರ್ಯಾಚರಣೆ ಮಾಡುತ್ತಿದೆ.

ಪ್ಯಾರಿಸ್‌ನಲ್ಲಿ ನಡೆದ ‘ಹಣಕಾಸು ಕ್ರಿಯಾ ಕಾರ್ಯಪಡೆ (ಫೈನಾನ್ಷಿಯಲ್‌ ಆ್ಯಕ್ಷನ್‌ ಟಾಸ್ಕ್‌ಫೋರ್ಸ್‌- ಎಫ್‌ಎಟಿಎಫ್‌)’ ಉಗ್ರರ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದರೆ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸುವುದಾಗಿ ಗುಡುಗಿತ್ತು. ಅದರ ಬೆನ್ನಲ್ಲೇ ಪಾಕಿಸ್ತಾನವು ಜೈಷ್‌ ವಿರುದ್ಧ ಕ್ರಮ ಕೈಗೊಂಡಿರುವುದು ಗಮನಾರ್ಹ.

ಬೆಚ್ಚಿದ ಪಾಕ್ ಸೈತಾನ್‌!

1. ಯುದ್ಧ ಭೀತಿಯಿಂದಾಗಿ ಭಾರತ ಗಡಿಯಿಂದ ಸುಮಾರು 150 ಕಿ.ಮೀ. ದೂರದಲ್ಲಿರುವ, ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಬಹಾವಲ್‌ಪುರದಲ್ಲಿರುವ ಜೈಷ್‌ ಉಗ್ರರ ಕೇಂದ್ರ ಕಚೇರಿ ಎನ್ನಲಾಗಿರುವ ಕ್ಯಾಂಪಸ್‌ ವಶಕ್ಕೆ. ಆಡಳಿತಾಧಿಕಾರಿ ನೇಮಕ, ಬಿಗಿ ಭದ್ರತೆ

2. ಕಾಶ್ಮೀರ ಗಡಿ ಪ್ರದೇಶಕ್ಕೆ ಯುದ್ಧ ಸಲಕರಣೆ ರವಾನೆ. ಸೇನಾಧಿಕಾರಿಗಳು, ಸೈನಿಕರ ರಜೆ ಏಕಾಏಕಿ ರದ್ದುಗೊಳಿಸಿ ಕರ್ತವ್ಯಕ್ಕೆ ಮರು ನಿಯೋಜನೆ

3. ಗಡಿ ಪ್ರದೇಶದ ಗ್ರಾಮಸ್ಥರ ತೆರವು. ಗಡಿಯಲ್ಲಿ ಕಟ್ಟೆಚ್ಚರದಿಂದ ಇರುವಂತೆ ಸೈನಿಕರಿಗೆ ಸೂಚನೆ. ರಾತ್ರಿ ವೇಳೆ ದೀಪ ಬೆಳಗದಂತೆ ಜನರಿಗೆ ಆದೇಶ

4. ರಕ್ತ ಇತ್ಯಾದಿ ತುರ್ತು ವ್ಯವಸ್ಥೆ ಸಿದ್ಧವಾಗಿಡುವಂತೆ ಹಾಗೂ ಅಗತ್ಯ ವೈದ್ಯಕೀಯ ಸಲಕರಣೆ ಸಜ್ಜಾಗಿಡಲು ಆಸ್ಪತ್ರೆಗಳಿಗೂ ಪಾಕ್‌ ಸೇನೆಯಿಂದ ಪತ್ರ