ನ್ಯೂಯಾರ್ಕ್(ಸೆ.30): ಭಾರತದ ಇನ್ನು ಸುಮ್ಮನೆ ಕೂರಲ್ಲ ಎಂಬ ಸಂದೇಶ ಪಡೋಸಿ ಪಾಕಿಸ್ತಾನಕ್ಕೆ ಹೋಗಿ ವರ್ಷಗಳೇ ಸಂದಿವೆ. ವಿಶ್ವದ ಪ್ರಮುಖ ವೇದಿಕೆಗಳಲ್ಲಿ ಪಾಕಿಸ್ತಾನದ ಮುಖವಾಡ ಕಳಚಲು ಸಿಗುವ ಯಾವುದೇ ಅವಕಾಶವನ್ನು ಭಾರತ ಮಿಸ್ ಮಾಡಿಕೊಳ್ಳುವುದಿಲ್ಲ.

ಅದರಂತೆ ವಿಶ್ವಸಂಸ್ಥೆಯ 73 ನೇ ಸಾಮಾನ್ಯ ಸಭೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಾತನಾಡಿದ್ದು, ನಿರಂತರ ಎಚ್ಚರಿಕೆಯ ಹೊರತಾಗಿಯೂ ಮೊಂಡುತನ ಪ್ರದರ್ಶಿಸುತ್ತಿರುವ ಪಾಕಿಸ್ತಾನವನ್ನು ಹಿಗ್ಗಾ ಮುಗ್ಗಾ ಝಾಡಿಸಿದ್ದಾರೆ.

ಭಯೋತ್ಪಾದನೆ, ಹವಾಮಾನ ಬದಲಾವಣೆ, ಸಮರ್ಥನೀಯ ಅಭಿವೃದ್ಧಿ ಗುರಿಗಳು ಮತ್ತು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಆಗಬೇಕಿರುವ ಬದಲಾವಣೆ ಬಗ್ಗೆ ಮಾತನಾಡಿರುವ ಸುಷ್ಮಾ ಸ್ವರಾಜ್, ವಸುದೈವ ಕುಟುಂಬಕಂ ಎಂಬುದು ಭಾರತದ ತತ್ವ. ಇಡಿ ವಿಶ್ವ ಒಂದೇ ಕುಟುಂಬವಿದ್ದಂತೆ ಹಾಗೂ ಆ ಕುಟುಂಬದಲ್ಲಿ ಪರಸ್ಪರ ಸಂವೇದನೆಯಿರಬೇಕು ಎಂದು ಮಾರ್ಮಿಕವಾಗಿ ಹೇಳಿದ್ದಾರೆ. 

ಪಾಕಿಸ್ತಾನವನ್ನು ತಮ್ಮ ಭಾಷಣದಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡ, ಸುಷ್ಮಾ ಸ್ವರಾಜ್, ಪಾಕಿಸ್ತಾನ ಒಂದೆಡೆ ಭಾರತದೊಂದಿಗೆ ಮಾತುಕತೆ ನಡೆಸಬೇಕು ಎನ್ನುತ್ತಿದೆ. ಮತ್ತೊಂದೆಡೆ ಗಡಿ ಪ್ರದೇಶದಲ್ಲಿ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ ಎಂದು ಸುಷ್ಮಾ ಕಿಡಿ ಕಾರಿದರು.

ಇದೇ ವೇಳೆ ಭಾರತದ ಸಾಧನೆಗಳ ಬಗ್ಗೆಯೂ ಮಾತನಾಡಿರುವ ಸುಷ್ಮಾ ಸ್ವರಾಜ್, ಭಾರತ ವಿಶ್ವಸಂಸ್ಥೆಯ ಅಜೆಂಡಾಗಳು ವಿಫಲವಾಗುವುದಕ್ಕೆ ಎಂದಿಗೂ ಬಿಡುವುದಿಲ್ಲ ಎಂದು ಭರವಸೆ ನೀಡಿದರು.

2030 ಕ್ಕೆ ನಿಗದಿಯಾಗಿರುವ ಗುರಿಯನ್ನು ತಲುಪಲು ಪ್ರಧಾನಿ ನರೇಂದ್ರ ಮೋದಿ ಕೆಲಸ ಮಾಡುತ್ತಿರುವ ವೇಗ ನೋಡಿದರೆ ಗುರಿಯನ್ನು ನಿಗದಿಗಿಂತಲೂ ಮುಂಚೆಯೇ ಪೂರ್ಣಗೊಳಿಸುವ ಸೂಚನೆ ನೀಡುತ್ತಿದ್ದು, ನಾವು ಗುರಿಯನ್ನು ತಲುಪುವುದಕ್ಕೆ ಸುಸಜ್ಜಿತವಾಗಿದ್ದೇವೆ ಎಂದು ಸುಷ್ಮಾ ಸ್ವರಾಜ್ ವಿಶ್ವಕ್ಕೆ ಭರವಸೆ ನೀಡಿದರು.

"