ನವದೆಹಲಿ[ಆ.28]: ಸಾಲು ಸಾಲು ಮುಖಭಂಗ ಅನುಭವಿಸಿದರೂ ಪಾಕಿಸ್ತಾನ ಪಾಠ ಕಲಿತಂತೆ ಕಾಣುತ್ತಿಲ್ಲ. ಉರಿಯುವ ಬೆಂಕಿಗೆ ತುಪ್ಪ ಸುರಿಯುವುದಕ್ಕೆ ಹೊರಟಿರುವ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯುದ್ದಕ್ಕೂ 100 ಕ್ಕೂ ಹೆಚ್ಚಿನ ಎಸ್‌ಎಸ್‌ಜಿ ಕಮಾಂಡೋಗಳನ್ನು ನಿಯೋಜಿಸುವ ಮೂಲಕ ದಾಳಿಯ ಮುನ್ಸೂಚನೆ ನೀಡಿದೆ.

ಜೈಷ್‌ ಹಾಗೂ ಇತರೆ ಉಗ್ರ ಸಂಘಟನೆಗಳ ನೆರವಿನೊಂದಿಗೆ ಗಡಿಯಲ್ಲಿ ಪಾಕ್‌ ಸೇನೆ ಕದನ ವಿರಾಮ ಉಲ್ಲಂಘಿಸುತ್ತಿದ್ದು ಈ ಎಲ್ಲಾ ಚಟುವಟಿಕೆಗಳ ಮೇಲೆ ಭಾರತೀಯ ಸೇನೆ ಹದ್ದಿನ ಕಣ್ಣಿಟ್ಟಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಗಡಿಯಲ್ಲಿ ಪಾಕಿಸ್ತಾನ ದಾಳಿ ಮಾಡುವ ಸಾಧ್ಯತೆ ಕೂಡ ಇದ್ದು, ಭಾರತೀಯ ಸೇನೆ ದಾಳಿಯನ್ನು ಎದುರಿಸಲು ಸರ್ವಸಜ್ಜಾಗಿದೆ. ಅಲ್ಲದೇ ಪಾಕ್‌ನ ಸರ್‌ ಕ್ರೀಕ್‌ ಪ್ರದೇಶದಲ್ಲಿ ಪಾಕ್‌ ಸೇನೆ ಕಮಾಂಡೊಗಳನ್ನು ನಿಯೋಜಿಸುತ್ತಿರುವುದು ಕೂಡ ಭಾರತೀಯ ಸೇನೆಯ ಗಮನಕ್ಕೆ ಬಂದಿದೆ.

ಗಡಿ ಭಾಗದ ಲೀಪಾ ಕಣಿವೆಯಲ್ಲಿ ಜೈಷ್‌-ಎ-ಮೊಹಮ್ಮದ್‌ ಸಂಘಟನೆ 12 ಆಷ್ಘಾನ್‌ ಜಿಹಾದಿಗಳನ್ನು ನಿಯೋಜಿಸಿದ್ದು, ಪಾಕ್‌ ದಾಳಿ ವೇಳೆ ಅವರೂ ಕೈ ಜೋಡಿಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಕೆಲ ದಿನಗಳ ಹಿಂದಷ್ಟೇ ಮಾಹಿತಿ ನೀಡಿತ್ತು. ಹಾಗಾಗಿ ಗಡಿಯಲ್ಲಿ ಸೇನೆ ಹೈ ಅಲರ್ಟ್‌ ಘೋಷಣೆ ಮಾಡಿದೆ.