ಜಬಾ (ಮಾ. 09):  ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಾಲಾಕೋಟ್‌ನಲ್ಲಿ ಯಾವುದೇ ಉಗ್ರರ ನೆಲೆ ಇಲ್ಲ. ಆ ಪ್ರದೇಶದ ಮೇಲೆ ಇತ್ತೀಚೆಗೆ ಭಾರತೀಯ ವಾಯುಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಯಾವುದೇ ಕಟ್ಟಡಗಳಿಗೂ ಹಾನಿಯಾಗಿಲ್ಲ ಎಂದು ವಾದಿಸುತ್ತಲೇ ಇರುವ ಪಾಕಿಸ್ತಾನ, ಇದೀಗ ದಾಳಿಯ ಸ್ಥಳಕ್ಕೆ ತೆರಳದಂತೆ ಮಾಧ್ಯಮ ಸಂಸ್ಥೆಗಳಿಗೆ ನಿಷೇಧ ಹೇರಿದೆ. ಇದು, ದಾಳಿಯ ಸ್ಥಳದಿಂದ ಉಗ್ರರ ಇರುವಿಕೆಯ ಕುರಿತ ಎಲ್ಲಾ ಸಾಕ್ಷ್ಯಗಳನ್ನು ನಾಶ ಮಾಡಲು ಪಾಕಿಸ್ತಾನ ಹೂಡಿದ ತಂತ್ರವೆಂದೇ ಪರಿಗಣಿಸಲಾಗಿದೆ.

ಮಂಗಳವಾರ ರಾಯಿಟ​ರ್‍ಸ್ ಸುದ್ದಿಸಂಸ್ಥೆಯ ಪತ್ರಕರ್ತರು, ಬಾಲಾಕೋಟ್‌ ಪ್ರದೇಶಕ್ಕೆ ತೆರಳಲು ಯತ್ನಿಸಿದ ವೇಳೆ, ಭದ್ರತೆಯ ನೆಪವೊಡ್ಡಿ, ಸ್ಥಳದಲ್ಲಿ ನಿಯೋಜನೆಗೊಂಡಿರುವ ಭದ್ರತಾ ಸಿಬ್ಬಂದಿ, ಮಾಧ್ಯಮ ಸಿಬ್ಬಂದಿಗಳಿಗೆ ಪ್ರವೇಶ ನಿರಾಕರಿಸಿದ್ದಾರೆ. ಕಳೆದ 9 ದಿನಗಳಲ್ಲಿ ಹೀಗೆ ಮಾಧ್ಯಮ ಪ್ರತಿನಿಧಿಗಳಿಗೆ ಘಟನಾ ಸ್ಥಳಕ್ಕೆ ತೆರಳದಂತೆ ಪಾಕಿಸ್ತಾನ ಅಡ್ಡಿ ಮಾಡಿದ 3ನೇ ನಿದರ್ಶನ ಇದಾಗಿದೆ.

ದಾಳಿ ನಡೆದ ಪ್ರದೇಶಕ್ಕಿಂತ ಸ್ವಲ್ಪ ದೂರದಲ್ಲಿನ ಗ್ರಾಮಗಳ ಜನರನ್ನು ಸುದ್ದಿ ಸಂಸ್ಥೆಗಳು ಮಾತನಾಡಿಸಿದಾಗ, ಬಾಲಾಕೋಟ್‌ನ ಗುಡ್ಡಪ್ರದೇಶದಲ್ಲಿ ಜೈಷ್‌ ಎ ಮಹಮ್ಮದ್‌ ಸಂಘಟನೆ ಮದ್ರಸಾ ನಡೆಸುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ. ಮದ್ರಸಾ ಹೆಸರಲ್ಲಿ ನಡೆಯುತ್ತಿದ್ದ ಈ ಶಾಲೆಗಳಲ್ಲಿ ಉಗ್ರರಿಗೆ ವಿವಿಧ ರೀತಿಯ ಜಿಹಾದ್‌ ತರಬೇತಿ ನೀಡಲಾಗುತ್ತಿತ್ತು.

ಅವರನ್ನು ಭಾರತದ ಮೇಲೆ ದಾಳಿಗೆ ಎಲ್ಲಾ ರೀತಿಯಲ್ಲೂ ಸಜ್ಜುಗೊಳಿಸಲಾಗುತ್ತಿತ್ತು ಎಂಬುದು ಭಾರತದ ವಾದ. ಇದೇ ಕಾರಣಕ್ಕಾಗಿಯೇ ಅದು ಫೆ.26ರಂದು ಈ ಪ್ರದೇಶಗಳ ಮೇಲೆ ಬಾಂಬ್‌ ದಾಳಿ ನಡೆಸಿತ್ತು.

ಈ ದಾಳಿಯಲ್ಲಿ ಹಲವು ಕಟ್ಟಡಗಳು ಧ್ವಂಸಗೊಂಡಿದ್ದು ಭಾರೀ ಪ್ರಮಾಣದಲ್ಲಿ ಜೈಷ್‌ ಎ ಮಹಮ್ಮದ್‌ ಸಂಘಟನೆಯ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಭಾರತ ಸರ್ಕಾರ, ದಾಳಿಯ ಬಳಿಕದ ತನ್ನ ಮೊದಲ ಹೇಳಿಕೆಯಲ್ಲಿ ಸ್ಪಷ್ಟಪಡಿಸಿತ್ತು.

ಆದರೆ ಪಾಕಿಸ್ತಾನ ಮಾತ್ರ ದಾಳಿಯಿಂದಾದ ಮುಖಭಂಗ ತಪ್ಪಿಸುವ ನಿಟ್ಟಿನಲ್ಲಿ ಬಾಲಾಕೋಟ್‌ನಲ್ಲಿ ಯಾವುದೇ ಉಗ್ರ ಶಿಬಿರಗಳಿಲ್ಲ. ಜೊತೆಗೆ ಭಾರತದ ದಾಳಿಯಲ್ಲಿ ಯಾವುದೇ ಕಟ್ಟಡಗಳಿಗೆ ಹಾನಿಯಾಗಿಲ್ಲ. ಕೇವಲ ಮರಗಳಿಗೆ ಹಾನಿಯಾಗಿದೆ ಎಂದು ಹೇಳಿಕೊಂಡೇ ಬಂದಿತ್ತು. ಆದರೆ ಆ ಸ್ಥಳಕ್ಕೆ ಪದೇ ಪದೇ ಮಾಧ್ಯಮ ಸಿಬ್ಬಂದಿಗಳ ಪ್ರವೇಶಕ್ಕೆ ತಡೆ ಒಡ್ಡುತ್ತಿರುವುದು, ಸ್ಥಳದಲ್ಲಿನ ಉಗ್ರರ ಇರುವಿಕೆಯ ಎಲ್ಲಾ ಕುರುಹುಗಳನ್ನು ನಾಶಪಡಿಸುವ ಯತ್ನವೆಂದೇ ಹೇಳಲಾಗಿದೆ.