7 ಪ್ರಯಾಣಿಕರನ್ನು ನಿಲ್ಲಿಸಿಕೊಂಡೇ ಕರೆದೊಯ್ದ ಪಿಐಎ

ಇಸ್ಲಾಮಾಬಾದ್‌: ಬಸ್‌ ಅಥವಾ ರೈಲುಗಳಲ್ಲಿ ಸೀಟು ಖಾಲಿ ಇರದಿದ್ದರೆ, ಜನರು ನಿಂತುಕೊಂಡೇ ತಾಸುಗಟ್ಟಲೇ ಪ್ರಯಾಣಿಸುವುದು ಭಾರತದಲ್ಲಿ ಸರ್ವೇಸಾಮಾನ್ಯ. ಆದರೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಪಾಕಿಸ್ತಾನದ ಸರ್ಕಾರಿ ಸ್ವಾಮ್ಯದ ವಿಮಾನಯಾನ ಕಂಪನಿ ‘ಪಾಕಿಸ್ತಾನ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌' (ಪಿಐಎ), ಏಳು ಮಂದಿ ಪ್ರಯಾಣಿಕರನ್ನು ನಿಂತುಕೊಂಡೇ ಕರೆದುಕೊಂಡುವ ಹೋಗುವ ಮೂಲಕ ವೈಮಾನಿಕ ನಿಯಮಗಳನ್ನು ಗಾಳಿಗೆ ತೂರಿದ ವಿವಾದದಲ್ಲಿ ಸಿಲುಕಿದೆ. ಈ ವಿಷಯ ತಡವಾಗಿ ಬೆಳಕಿಗೆ ಬರುತ್ತಿದ್ದಂತೆ ತನಿಖೆಗೆ ಆದೇಶಿಸಲಾಗಿದೆ.

ಜ.20ರಂದು ಕರಾಚಿಯಿಂದ ಸೌದಿ ಅರೇಬಿಯಾದ ಮದೀನಾಕ್ಕೆ ಹೊರಟ ಬೋಯಿಂಗ್‌ 777 ವಿಮಾನದಲ್ಲಿ 409 ಸೀಟುಗಳು ಇದ್ದವು. ಆದರೆ, ಆ ವಿಮಾನದಲ್ಲಿ 416 ಪ್ರಯಾಣಿಕರನ್ನು ತುಂಬಲಾಗಿತ್ತು. ಈ ಹೆಚ್ಚುವರಿ ಪ್ರಯಾಣಿಕರಿಗೆ ಕೈಬರಹದ ಬೋರ್ಡಿಂಗ್‌ ಪಾಸ್‌ ನೀಡಲಾಗಿತ್ತು. ಈ ಏಳೂ ಮಂದಿ ಮೂರು ತಾಸಿನ ಪ್ರಯಾಣ ಅವಧಿಯನ್ನು ಸೀಟುಗಳ ನಡುವೆ ನಿಂತುಕೊಂಡೇ ಪ್ರಯಾಣಿಸಿದ್ದರು. ಇಷ್ಟಾದರೂ ಈ ಘಟನೆಯನ್ನು ವಿಮಾನ ಸಿಬ್ಬಂದಿ ಗಂಭೀರವಾಗಿ ಪರಿಗಣಿಸಿರಲಿಲ್ಲ. 

ವಿಶೇಷ ಎಂದರೆ, ಹೆಚ್ಚುವರಿ ಪ್ರಯಾಣಿಕರಿಂದಾಗಿ ಸಮಸ್ಯೆಯಾಗುತ್ತಿದೆ ಎಂದು ಗಗನಸಖಿ ವಿಮಾನದ ಪೈಲಟ್‌ಗೆ ಮಾಹಿತಿ ನೀಡಿದ್ದರು. ಆದರೆ ಅಷ್ಟರಲ್ಲಾಗಲೇ ವಿಮಾನ ರನ್‌ವೇಯಲ್ಲಿ ಓಡಲು ಆರಂಭಿಸಿದ್ದರಿಂದ ‘ಅಡ್ಜಸ್ಟ್‌' ಮಾಡಿಕೊಳ್ಳುವಂತೆ ಪೈಲಟ್‌ ಸೂಚಿಸಿದ್ದರು. ಈ ಬಗ್ಗೆ ವಿಚಾರಿಸಿದಾಗ, ಹೆಚ್ಚುವರಿ ಪ್ರಯಾಣಿಕರನ್ನು ಇಳಿಸಲು ಹಾರಾಟ ರದ್ದುಗೊಳಿಸಿದರೆ ಇಂಧನ ವ್ಯರ್ಥವಾಗುತ್ತದೆ. ಈಗಾಗಲೇ ನಷ್ಟದಲ್ಲಿರುವ ಸಂಸ್ಥೆಗೆ ಮತ್ತಷ್ಟುಹೊರೆ ಬೀಳುತ್ತದೆ ಎಂಬ ಉತ್ತರವನ್ನು ಪೈಲಟ್‌ ನೀಡಿದ್ದಾರೆ! ನಿಯಮಗಳ ಪ್ರಕಾರ, ವಿಮಾನಗಳಲ್ಲಿ ಪ್ರಯಾಣಿಕರನ್ನು ನಿಲ್ಲಿಸಿಕೊಂಡು ಕರೆದು ಕೊಂಡು ಹೋಗುವಂತಿಲ್ಲ.

(epaper.kannadaprabha.in)